Site icon Vistara News

ಮುಂದುವರಿದ ಮಳೆ ಆರ್ಭಟ; ಉತ್ತರ ಕನ್ನಡದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಅಪಾಯದಲ್ಲಿ

Rain

ಕಾರವಾರ: ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಹಲವು ಭಾಗಗಳಲ್ಲಿ ಅವಘಡಗಳು ಉಂಟಾಗಿವೆ. ಆಗಸ್ಟ್​ 1ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಯಿಂದ ಕುಮಾರಧಾರಾ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಶ್ರುತಿ (11) ಮತ್ತು ಜ್ಞಾನಶ್ರೀ (6) ಎಂಬ ಮಕ್ಕಳು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಜೆಸಿಬಿ ತಂದು ಹೊರತೆಗೆಯಲಾಗಿದೆ.

ಅದರ ಕಹಿ ನೆನಪು ಮಾಸುವ ಮುನ್ನವೇ, ಇಂದು ಉತ್ತರ ಕನ್ನಡದ ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಹೀಗೆ ಕುಸಿದ ಗುಡ್ಡದ ಅಡಿಯಲ್ಲಿ ಇರುವ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ. ಲಕ್ಷ್ಮೀ ನಾಯ್ಕ್​, ಅವರ ಮಗಳು ಲಕ್ಷ್ಮೀ, ಮಗ ಅನಂತ್ ನಾಯ್ಕ್​ (32), ಇವರ ಸಹೋದರಿಯ ಮಗ ಪ್ರವೀಣ್​ ನಾಯ್ಕ್​ (20) ಈ ಮನೆಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ತಡರಾತ್ರಿ ಸುರಿದ ಭರ್ಜರಿ ಮಳೆಯಿಂದ ಅವಘಡ ಉಂಟಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಇಲ್ಲಿಗೆ ಜೆಸಿಬಿ ಕೂಡ ಆಗಮಿಸಲು ತಡವಾಯಿತು. ಸ್ಥಳೀಯರೇ ಸೇರಿ ಮನೆಯವರ ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಇದೀಗ ಸ್ಥಳಕ್ಕೆ ಜೆಸಿಬಿ ಬಂದಿದ್ದು, ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಕಲಬುರಗಿಯಲ್ಲಿ ವಿಪರೀತ ಮಳೆಯಿಂದಾಗಿ ಹಳ್ಳ-ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಇಲ್ಲಿ ಆಳಂದಾ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಶ್ರೀಪತಿ ಎಂಬುವರು ಹಳ್ಳವನ್ನು ದಾಟಲು ಹೋಗಿ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಹಾಗಿದ್ದಾಗ್ಯೂ ಶ್ರೀಪತಿ ಅದನ್ನು ದಾಟಿ ಹೋಗಲು ಮುಂದಾದರು. ಅಲ್ಲಿದ್ದ ಇನ್ನೂ ಕೆಲವರು ಬೇಡವೆಂದರೂ ಅವರು ಕೇಳಲಿಲ್ಲ. ಶ್ರೀಪತಿ ಗ್ರಾಮಸ್ಥರ ಎದುರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇಲ್ಲಿ ನಿಂಬರ್ಗಾ ಮತ್ತು ಸ್ಟೇಶನ್​ ಗಾರಣಾಗಪುರ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ಭಾರಿ ಮಳೆಗೆ ನಲುಗಿದ ಸುಬ್ರಹ್ಮಣ್ಯ: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತ್ಯು, ಕ್ಷೇತ್ರಕ್ಕೆ ಬರದಂತೆ ಮನವಿ

Exit mobile version