ಬೆಂಗಳೂರು: ರಾಜ್ಯದಲ್ಲಿ ಸತತ ಮಳೆಯಿಂದ(Rain) ವಿವಿಧೆಡೆ ಅಪಾರ ಬೆಳೆಹಾನಿ ಜತೆಗೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
114 ಮನೆಗಳಿಗೆ ಹಾನಿ: ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ 114 ಮನೆಗಳಿಗೆ ಭಾಗಶಃ ಹಾನಿಯಾಗಿ, ಒಂದು ಮನೆ ಸಂಪೂರ್ಣ ಹಾನಿಯಾಗಿರುವುದರಿಂದ ಜನರು ಪರದಾಡುವಂತಾಗಿದೆ. ಮುಧೋಳ ತಾಲೂಕಿನ ಮಿರ್ಜಿ ಸೇತುವೆ ಜಲಾವೃತಗೊಂಡಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಾರಿಗೆ ಸಂಪರ್ಕ ಸ್ಥಗಿತವಾಗಿದೆ. ಪೆಟ್ಲೂರ ಕ್ರಾಸ್ ಬಳಿಯ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆ ಸೇರಿ ಹಲವು ಬೆಳೆಗಳು ಜಲಾವೃತವಾಗಿವೆ. ರಬಕವಿ-ಬನಹಟ್ಟಿ ತಾಲೂಕಿನ ಧವಳೇಶ್ವರ ಸೇತುವೆಯೂ ಜಲಾವೃತವಾಗಿ ರಸ್ತೆ ಸಂಪರ್ಕ ಬಂದ್ ಆಗಿದೆ. ಜತೆಗೆ ಜಿಲ್ಲೆಯ ಹಲವೆಡೆ ಜಮೀನುಗಳಿಗೆ ಮಳೆ ನೀರು ನುಗಿದೆ. ಜಮಖಂಡಿ ತಾಲೂಕಿನಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ.
ಭತ್ತದ ಗದ್ದೆಗೆ ನುಗಿದ ನೀರು: ಇನ್ನು ವಿಜಯನಗರ ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ಹೂವಿನ ಹಡಗಲಿ ತಾಲೂಕಿನ ಬ್ಯಾಲಹುಣಸಿ ಗ್ರಾಮದಲ್ಲಿ ಭತ್ತದ ಬೆಳೆಗೆ ಅಪಾರ ಪ್ರಮಾಣದ ನೀರು ಹೋಗಿದ್ದು, ಕಟಾವಿನ ಹಂತಕ್ಕೆ ತಲುಪಿರೋ ಸಾವಿರಾರು ಎಕರೆ ಭತ್ತದ ಗದ್ದೆಗಳು ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ. ವರುಣನ ಅವಾಂತರಕ್ಕೆ ವಿಜಯಪುರ ತಾಲೂಕು ಹೊನ್ನುಟಗಿ ಗ್ರಾಮದ ರೈತ ಸುರೇಶ ಬಿಸನಾಳ ಜಮೀನಿನಲ್ಲಿದ್ದ ಶೇಂಗಾ ಬೆಳೆ ನಾಶವಾಗಿದೆ. ಕೆಲವೆಡೆ ಕಟಾವು ಮಾಡಿದ ಶೇಂಗಾ ತೇವಾಂಶದಿಂದ ಕಪ್ಪುಬಣ್ಣಕ್ಕೆ ತಿಗುಗಿದೆ.
ರಸ್ತೆಯಲ್ಲಿ ಪೈರು ನಾಟಿ ಮಾಡಿ ಆಕ್ರೋಶ: ಮಂಡ್ಯ ಜಿಲ್ಲೆಯಲ್ಲಿ ಜೋರು ಮಳೆಯಿಂದ ಹಲವು ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಚೊಟ್ಟನಹಳ್ಳಿಯಲ್ಲಿ ಮೋರಿ ಅವ್ಯವಸ್ಥೆ, ರಸ್ತೆ ಕೆಸರುಗದ್ದೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯಲ್ಲೆ ರಾಗಿ ಪೈರು ನಾಟಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಶನಿವಾರ 61189 ಕ್ಯೂಸೆಕ್ ನೀರು ಒಳಹರಿವು, 285 ಕ್ಯೂಸೆಕ್ ನೀರು ಹೊರ ಹರಿವು ಇದೆ. ಸದ್ಯ ಜಲಾಶಯದಲ್ಲಿ 19.766 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದ ಒಟ್ಟು 100.089 ಟಿಎಂಸಿ, ಗರಿಷ್ಠ ಮಟ್ಟ 1633 ಅಡಿ, ಇಂದಿನ ಮಟ್ಟ 1600 ಅಡಿ ಇದೆ. ಹೆಚ್ಚಿದ ಪರಿಣಾಮದಿಂದ ಹಿನ್ನೀರ ಪ್ರದೇಶದ ಬೆಳೆಗಳಿಗೆ ನೀರು ನುಗ್ಗಿ, ಉದ್ದು, ಅಲಸಂದಿ, ಮೆಕ್ಕೆಜೋಳ ಸೇರಿ ಇನ್ನಿತರ ಬೆಳೆ ನಷ್ಟವಾಗಿದೆ. ಕೊಪ್ಪಳದ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ಬಂದ್ ಆಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿದ್ದು, ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಗೇಟ್‌ಗಳನ್ನು ತೆಗೆಸಿದ್ದಾರೆ. ತುಂಗಭದ್ರಾ ಜಲಾಶಯದ ಹಿನ್ನೀರಲ್ಲಿ ಭಾರಿ ಗಾತ್ರದ ಮೀನು ಪತ್ತೆಯಾಗಿದೆ. ತಾಲೂಕಿನ ತಿಗರಿ ಬಳಿ ಸುಮಾರು 20 ಕೆಜಿ ತೂಕದ ಮೀನು ಕಂಡು ಬಂದಿದ್ದು, ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಮಾಡಿದ್ದಾರೆ.
ಮಳೆ ಹಾನಿ ವೀಕ್ಷಣೆ
ಶಿವಮೊಗ್ಗ ನಗರದ ವಿವಿಧೆಡೆ ಭೇಟಿ ನೀಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಳೆ ಹಾನಿ ಪರಿಶೀಲಿಸಿ, ಸಾರ್ವ ಜನಿಕರ ಆಲಿಸಿದರು. ಶಾಸಕ ಕೆ.ಎಸ್.ಈಶ್ವರಪ್ಪ , ಎಂಎಲ್ಸಿ ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಇದ್ದರು. ಇನ್ನು ಕೊಪ್ಪಳ ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭೇಟಿ ಹಿರೇಸಿಂದೋಗಿ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ರೈತರ ಜಮೀನುಗಳಿಗೆ ನೀರು ನುಗಿ ಬೆಳೆಹಾನಿಯಾಗಿರುವುದನ್ನು ಪರಿಶೀಲಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ
ಬೆಂಗಳೂರಿನಲ್ಲಿ ಭಾರಿ ಮಳೆಯಿಂದ 3453 ಮನೆಗಳು ಹಾನಿಯಾಗಿದ್ದು, ಪ್ರತಿ ಸಂತ್ರಸ್ತ ಕುಟುಂಬಕ್ಕೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಶರತ್ ತಿಳಿಸಿದ್ದಾರೆ. 8.63 ಕೋಟಿ ರೂಪಾಯಿ ಪರಿಹಾರಧನ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸರ್ವೇ ಕಾರ್ಯ ಮುಂದುವರಿಯುತ್ತಿದೆ. ಇಂದಿನಿಂದ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸಾರಿಗೆ ಬಸ್ ಚಾಲಕನ ದುಸ್ಸಾಹಸ
ನಿರಂತರ ಮಳೆಯಿಂದ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ಚಾಲಕ ಬಸ್ ಚಾಲನೆ ಮಾಡಿರುವುದು ವಿಜಯಪುರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಳ್ ತಿಮ್ಮಲಾಪುರದ ಬಳಿ ನಡೆದಿದೆ. ಅರ್ಧ ಬಸ್ ಮುಳಗುವಷ್ಟು ನೀರು ಹರಿಯುತ್ತಿದ್ದರೂ ಇದ್ಯಾವುದನ್ನು ಲೆಕ್ಕಿಸದೆ ಬಸ್ಸನ್ನು ಚಾಲನೆ ಮಾಡಿದ್ದು, ಪ್ರಾಣದ ಹಂಗು ತೊರೆದು ಬಸ್ ಅನ್ನು ಸೇತುವೆ ದಾಟಿಸಿದ್ದಾನೆ ಎಂದು ಕೆಲವರು ಹೇಳುತ್ತಿದ್ದರೆ, ಅಷ್ಟು ಮಳೆ ನೀರಲ್ಲಿ ಹಳ್ಳ ದಾಟಿಸೋ ಅವಶ್ಯಕತೆ ಇರಲಿಲ್ಲಾ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
87 ಮನೆಗಳಿಗೆ ಹಾನಿ: ಹಾವೇರಿ ಜಿಲ್ಲೆಯಲ್ಲಿ ಮಳೆಯ ಆರ್ಭಟದಿಂದ 87 ಮನೆಗಳಿಗೆ ಹಾನಿಯಾಗಿದ್ದು, 370 ಹೆಕ್ಟೇರ್ ಕೃಷಿ ಬೆಳೆ ಹಾನಿ, 76 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಮೇ ತಿಂಗಳಲ್ಲಿ 40 ಮಿ.ಮಿಮೀ ವಾಡಿಕೆ ಮಳೆಯಾಗಬೇಕು, ಆದರೆ ಈ ಬಾರಿ 186 ಮಿ.ಮೀ ಮಳೆಯಾಗಿದೆ.
ಮಳೆಯಿಂದ ಅನುಕೂಲ, ಅನಾನುಕೂಲ : ಸಚಿವ ಗೋವಿಂದ್ ಕಾರಜೋಳ
ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತೊಂದರೆ ಹಾಗೂ ಅನುಕೂಲ ಎರಡೂ ಆಗಿದೆ. ಮಳೆ ಹಾನಿ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯಿಂದ 10% ಜನರಿಗೆ ತೊಂದರೆಯಾಗಿದ್ದು, ಚಿಕ್ಕೋಡಿಯಲ್ಲಿ ಡಿಸಿಗೆ ಸಭೆ ನಡೆಸಲು, ನದಿ ತೀರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಹಣಮಂತ ನಿರಾಣಿ ಒಳ್ಳೆಯ ಅಭ್ಯರ್ಥಿಯಾಗಿದ್ದು, ಅರುಣ್ ಶಹಾಪುರ ಆ್ಯಕ್ಟಿವ್ ಆಗಿದ್ದು, ಶಿಕ್ಷಕ್ಷರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡುತ್ತೇವೆ ಎಂದರು.
ಬಣ ರಾಜಕೀಯ ಇಲ್ಲ: ಬಿಜೆಪಿ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಜಾರಕಿಹೊಳಿ ಬ್ರದರ್ಸ್ ಸೇರಿ ಎಲ್ಲ ಮುಖಂಡರು ಸಭೆಗೆ ಬರ್ತಾರೆ. ಪಕ್ಷದಲ್ಲಿ ಬಣ ರಾಜಕೀಯ ಇಲ್ಲ, ಕೆಲವು ವಿಷಯಗಳಲ್ಲಿ ಭಿನ್ನಭಿಪ್ರಾಯ ಸಹಜ, ಇದು ಎಲ್ಲ ಪಕ್ಷಗಳಲ್ಲೂ ಇದೆ ಎಂದರು. ಸಿಎಂ ಆದ್ರೆ ಸಾಲ ಮನ್ನಾ ಮಾಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆದರೆ ದೇಶದಲ್ಲಿ ಮೋಸಗಾರಿಕೆ ಮಾಡಿಕೊಂಡು ಕಾಂಗ್ರೆಸ್ ಆಡಳಿತ ಮಾಡಿದೆ. ಜನರಿಗೆ ಬೇಕಾಗಿರುವುದು ಅಕ್ಕಿ ಅಲ್ಲ ಸ್ವಾಭಿಮಾನದ ಬದುಕು ಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Bengaluru Rain | ಅಬ್ಬರಿಸಿದ ಮಳೆ-ತತ್ತರಿಸಿದ ಬೆಂಗಳೂರು: ಇಬ್ಬರು ಕಾರ್ಮಿಕರ ಸಾವು