ಮಂಗಳೂರು: ಮಂಗಳೂರು, ಶಿವಮೊಗ್ಗ, ವಿಜಯಪುರ ಮತ್ತು ಇತರ ಕಡೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಮುಂಜಾನೆಯಿಂದ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಶಾಲೆಗಳಿಗೆ ರಜೆ: ಮಂಗಳೂರಿನಲ್ಲಿ ಮುಂಜಾನೆ ೪.೪ರ ಸುಮಾರಿಗೆ ಮಳೆ ಶುರುವಾಗಿದ್ದು, ಮುಂದುವರಿದಿದೆ. ಭಾರಿ ಮಳೆಯ ಕಾರಣ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ, ಮೂಲ್ಕಿ, ಮೂಡಬಿದಿರೆ, ಉಳ್ಳಾಲ, ಬಂಟ್ವಾಳ ವ್ಯಾಪ್ತಿಯಲ್ಲಿ ಅಂಗನವಾಡಿ, ಪ್ರೈಮರಿ, ಹೈಸ್ಕೂಲ್ ಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ವಿಜಯಪುರದಲ್ಲಿ ಹೆದ್ದಾರಿ ಸಂಚಾರಕ್ಕೆ ಅಡ್ಡಿ: ಡೋಣಿ ನದಿಪಾತ್ರದಲ್ಲಿ ಮಳೆಯ ಪರಿಣಾಮ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ರಾಜ್ಯ ಹೆದ್ದಾರಿ-೬೧ರಲ್ಲಿ ಕೆಳ ಸೇತುವೆಯ ಮಟ್ಟಕ್ಕೆ ನದಿಯ ನೀರು ಹರಿಯುತ್ತಿದೆ. ಕೆಳ ಸೇತುವೆ ಮುಳುಗಡೆಯಾಗಿ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಶಿಮೊಗ್ಗದಲ್ಲಿ ಭಾರಿ ಮಳೆ: ಶಿವಮೊಗ್ಗದಲ್ಲಿ ಕೂಡ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ನಗರದ ಅಣ್ಣಾ ನಗರ, ಬಾಪೂಜಿ ನಗರ, ಲಷ್ಕರ್ ಮೊಹಲ್ಲಾ ಮತ್ತಿತರ ಕಡೆ ತಗ್ಗುಪ್ರದೇಶಗಳು ಜಲಾವೃತವಾಗಿವೆ.