ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಕೆಲವೆಡೆ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿರುವುದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅದೇ ರೀತಿ ನಿರಂತರ ಮಳೆಯಿಂದ (Rain News) ಮನೆಗಳು, ಬೆಳೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮನೆಯ ಸೀಲಿಂಗ್ ಕುಸಿದು ನಾಲ್ವರಿಗೆ ಗಾಯ
ಬಾಗಲಕೋಟೆ: ಎರಡು ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಮನೆಯ ಚಾವಣಿಯ ಸೀಲಿಂಗ್ ಕುಸಿದು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಘಟನೆ. ತಾಯಿ ದೀಪಾ, ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಮನೆಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ.
ಖಾನಾಪುರ-ಹೆಮ್ಮಡಗಾ ಸಂಪರ್ಕ ಕಡಿತ
ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಖಾನಾಪುರದಿಂದ ಹೆಮ್ಮಡಗಾ ಅರಣ್ಯ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಖಾನಾಪುರ ತಾಲೂಕಿನ ಹೆಮ್ಮಡಗಾ ಮಾರ್ಗದ ಹಾಲತ್ರಿ ನದಿಯ ಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ, ಯಾರೂ ಸಂಚಾರ ಮಾಡದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ, ಕಣಕುಂಬಿ, ಹಬ್ಬಾನಟ್ಟಿ, ಹೆಮ್ಮಡಗಾ, ಗವಾಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಹೊರನಾಡು ರಸ್ತೆಗೆ ಅಡ್ಡಲಾಗಿ ಉರುಳಿದ ಮರ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ-ಗಾಳಿ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು-ಕೊಟ್ಟಿಗೆಹಾರ ಮಧ್ಯದ ಬಾಳೂರು ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಹೊರನಾಡು ಸಂಪರ್ಕ ಬಂದ್ ಆಗಿತ್ತು. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ, ಸ್ಥಳೀಯರಿಂದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಜಿಲ್ಲೆಯ ಕಳಸ ತಾಲೂಕು ಓಣಿಗಂಡಿ ಗ್ರಾಮದಲ್ಲಿ ಕಳೆದ ವರ್ಷ ಮನೆಯ ಅಡಿಪಾಯಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಕುಸಿದಿದೆ. ಭಾಸ್ಕರ್ ಡೋಂಗ್ರೆ ಎಂಬುವರ ಮನೆ ಅಡಿಪಾಯಕ್ಕೆ ನಿರ್ಮಿಸಿದ್ದ ತಡೆಗೋಡೆ ಕುಸಿದಿದೆ ಹೀಗಾಗಿ ಮನೆ ಕುಸಿತದ ಭೀತಿಯಲ್ಲಿ ಕುಟುಂಬಸ್ಥರು ಇದ್ದಾರೆ.
ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವು
ಧಾರಾಕಾರ ಮಳೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ವೃದ್ಧೆ ಮೃತಪಟ್ಟಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ. ರಭಸವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದರಿಂದ ವೃದ್ಧೆ ಕೊಚ್ಚಿಕೊಂಡು ಹೋಗಿದ್ದರು. ದಾರದಹಳ್ಳಿ ಗ್ರಾಮದ ದೇವಮ್ಮ (61) ಮೃತರು.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಬದಿ ಭೂ ಕುಸಿತ
ಹಾಸನ: ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನ ಹಲವು ಕಡೆ ಭಾರಿ ಮಳೆಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಮಳೆ ಆರ್ಭಟ ಹಿನ್ನೆಲೆಯಲ್ಲಿ ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಬದಿ ಭೂ ಕುಸಿತವಾಗಿದೆ. ಸಕಲೇಶಪುರ ಸಮೀಪದ ಆನೆಮಹಲ್ ಬಳಿ ರಸ್ತೆ ಕುಸಿದಿದೆ. ಆತಂಕದಲ್ಲಿ ವಾಹನ ಸವಾರರು ಓಡಾಟ ನಡೆಸುತ್ತಿದ್ದಾರೆ. ಹೆದ್ದಾರಿಯ ಎರರೂ ಬದಿಯಲ್ಲೂ ಕುಸಿತವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.