ಬೆಂಗಳೂರು: ನಗರದ ಕೆ.ಆರ್. ಸರ್ಕಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್, ರೇಸ್ ಕೋರ್ಸ್ ಸೇರಿ ವಿವಿಧ ಭಾಗಗಳಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆ (Bangalore Rain) ಸುರಿಯಿತು. ಇದರಿಂದ ಹಲವೆಡೆ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಅದೇ ರೀತಿ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದರು.
ಮಳೆಯಿಂದಾಗಿ ರಸ್ತೆಗಳು ಕೆರೆಗಳಂತಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮೆಟ್ರೋ ನಿಲ್ದಾಣ, ಬಸ್ ತಂಗುದಾಣ ಹಾಗೂ ಕಟ್ಟಡಗಳ ಕೆಳಗೆ ಆಶ್ರಯ ಪಡೆದರು. ವಿವಿ ಪುರಂ ಮತ್ತು ನಂದಿನಿ ಲೇಔಟ್‌ನಲ್ಲಿ ಕ್ರಮವಾಗಿ 1,03,000 ಮತ್ತು 1,08,000 ಆಂಪ್ಸ್ ಪ್ರಮಾಣದ ಮಿಂಚು ದಾಖಲಾಗಿದೆ.
ಅನುಗ್ರಹ ಲೇಔಟ್ ಜಲಾವೃತ
ಬೊಮ್ಮನಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಇಲ್ಲಿನ ಅನುಗ್ರಹ ಲೇಔಟ್ ಜಲಾವೃತವಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಪರದಾಡಿದರು. ಇನ್ನು ಮೂರ್ನಾಲ್ಕು ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಮನೆಯ ಮೆಟ್ಟಿಲವರೆಗೂ ನೀರು ನಿಂತಿರುವ ಹಿನ್ನೆಲೆಯಲ್ಲಿ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ ಬೊಮ್ಮನಹಳ್ಳಿಯ ಬೇಗೂರು ಫೋಸ್ಟ್ ಆಫೀಸ್ ಬಳಿಯೂ ರಸ್ತೆ ಜಲಾವೃತವಾಗಿದ್ದರಿಂದ ಮಳೆ ನೀರಿನಲ್ಲಿ ಹಲವು ಕಾರು, ಬೈಕ್‌ಗಳು ಮುಳುಗಿವೆ. ರಸ್ತೆಗಳು ಸಂಪೂರ್ಣ ಕೆರೆಯಂತಾಗಿದ್ದರಿಂದ ಮನೆಗಳಿಗೆ ಕೊಳಚೆ ನೀರು ನುಗ್ಗಿ ಮನೆಗಳಲ್ಲಿರುವ ವಸ್ತುಗಳು ನೀರುಪಾಲಾಗಿವೆ.
ಅಂಡರ್‌ಪಾಸ್‌ಗಳಲ್ಲಿ ಭಾರಿ ನೀರು
ವಿಧಾನಸೌಧ ಬಳಿಯ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಮತ್ತೆ ಜಲಾವೃತವಾಗಿತ್ತು. ಲೋಕಾಯುಕ್ತ ಕಚೇರಿ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಹ ಎಂದಿನಂತೆ ಅವ್ಯವಸ್ಥೆ ಉಂಟಾಗಿತ್ತು. ರಸ್ತೆಯಲ್ಲಿ ಬೃಹತ್ ಪ್ರಮಾಣದ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು. ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಸೇರಿ ಹಲವೆಡೆ ವಾಹನ ದಟ್ಟಣೆ ಉಂಟಾಗಿತ್ತು.
ಧಾರಕಾರ ಮಳೆ ಹಿನ್ನೆಲೆಯಲ್ಲಿ ಶಿವಾನಂದ ಸರ್ಕಲ್ ಬಳಿಯ ರೈಲ್ವೆ ಅಂಡರ್ ಪಾಸ್, ಬಳ್ಳಾರಿ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿತ್ತು. ಮತ್ತೊಂದೆಡೆ ಬೆಂಗಳೂರು ದಕ್ಷಿಣದಲ್ಲಿ ಭಾರಿ ಮಳೆಯಾಗಿದ್ದು, ಬಿಳೇಕಹಳ್ಳಿ, ಬೊಮ್ಮನಹಳ್ಳಿ ವಲಯದಲ್ಲಿ ಭಾರಿ ಮಳೆಯಾಗಿದೆ.
ನೆಲಕ್ಕುರುಳಿದ ಐದು ಮರ
ಮಳೆಯ ಆರ್ಭಟಕ್ಕೆ ಜೆಪಿ ನಗರದಲ್ಲಿ 2, ಇನ್ ಫ್ಯಾಂಟ್ರಿ ರಸ್ತೆಯಲ್ಲಿ 1, ದಾಸರಹಳ್ಳಿಯಲ್ಲಿ 1, ರಾಜಕುಮಾರ್ ರಸ್ತೆಯಲ್ಲಿ (ರಾಮಮಂದಿರ) 2 ಮರಗಳು ಸೇರಿ 5 ಮರಗಳು ನೆಲಕ್ಕುರುಳಿವೆ ಎಂಬ ಮಾಹಿತಿ ಬಿಬಿಎಂಪಿ ನಿಯಂತ್ರಣ ಕೊಠಡಿಯಿಂದ ಲಭ್ಯವಾಗಿದೆ.
ಶಿವಾನಂದ ಸರ್ಕಲ್ ಬಳಿ ಬದಲಿ ಮಾರ್ಗ ಬಳಸಲು ಸೂಚನೆ
ಶಿವಾನಂದ ಸರ್ಕಲ್ ಬಳಿಯ ರೈಲ್ವೆ ಅಂಡರ್‌ಪಾಸ್ ಜಲಾವೃತವಾಗಿದ್ದರಿಂದ ಈ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ಬೇರೆ ಕಡೆ ಹೋಗಲು ಯುವಕನೊಬ್ಬ ಸೂಚಿಸುತ್ತಿದ್ದದ್ದು ಕಂಡುಬಂತು. ಕೆ.ಆರ್.ಸರ್ಕಲ್‌ನಲ್ಲಿ ಮೊನ್ನೆ ಕಾರೊಂದು ನೀರಿನಲ್ಲಿ ಮುಳುಗಿ ಯುವತಿ ಮೃತಪಟ್ಟಿದ್ದರು. ಹೀಗಾಗಿ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಮುಂಜಾಗ್ರತೆಯಾಗಿ ಆ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ಬೇರೆ ಮಾರ್ಗಕ್ಕೆ ತೆರಳಲು ಯುವಕ ಸೂಚಿಸಿದ್ದು ಕಂಡುಬಂತು.
ಇದನ್ನೂ ಓದಿ | Rain News: ಪೂರ್ವ ಮುಂಗಾರಿಗೆ ರಾಜ್ಯದಲ್ಲಿ 52 ಜನರ ಸಾವು, ಅಪಾರ ಆಸ್ತಿಪಾಸ್ತಿ ನಷ್ಟ
ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 24ರಿಂದ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.