ಬೆಂಗಳೂರು: ಮೋಚಾ ಚಂಡಮಾರುತದ ಪ್ರಭಾವದಿಂದ ಒಂದು ವಾರದ ಕಾಲ ಭಾರಿ ಮಳೆ (Karnataka Rain) ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸೋಮವಾರ ಸಂಜೆ ಧಾರಕಾರ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.
ಬೆಂಗಳೂರಿನಲ್ಲಿ ನಿರಂತರ ಮಳೆಗೆ ಕುಸಿದ ಮನೆ, ಎರಡು ಕಾರು ಜಖಂ
ಬೆಂಗಳೂರು: ನಿರಂತರ ಮಳೆಗೆ ನಗರದ ಹೊಸಕೆರೆಹಳ್ಳಿ ಸಮೀಪದ ವೀರಭದ್ರೇಶ್ವರ ನಗರದಲ್ಲಿ ಮನೆಯೊಂದು ಕುಸಿದಿದೆ. ಅಪಾರ್ಟ್‌ಮೆಂಟ್‌ವೊಂದರ ತಡೆಗೋಡೆ ಸಮೇತ ಪಕ್ಕದಲ್ಲಿದ್ದ ಮನೆ ಕುಸಿದು ಸಂಪೂರ್ಣ ನೆಲ ಸಮವಾಗಿದೆ. ವಸುಂಧರ ಕೃತಿಕಾ ಅಪಾರ್ಟ್‌ಮೆಂಟ್ ತಡೆ ಗೋಡೆಗೆ ಹೊಂದಿಕೊಂಡಿದ್ದ ಗೋಪಾಲ್ ಎಂಬುವರ ಮನೆ ಕುಸಿದಿದ್ದು, ಪಕ್ಕದಲ್ಲೇ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ | Weather Report: ಮೋಚಾ ಎಫೆಕ್ಟ್‌ಗೆ ಈ 5 ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಮತದಾನ ದಿನವೂ ಮಳೆಯಾಗುವುದೆ?
ಸಿಡಿಲಿಗೆ ಎರಡು ಎತ್ತುಗಳು ಬಲಿ
ಕೊಪ್ಪಳ: ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿರುವ ಘಟನೆ ತಾಲೂಕಿನ ಹಾಲಳ್ಳಿಯಲ್ಲಿ ಸೋಮವಾರ ನಡೆದಿದೆ. ಹಾಲಳ್ಳಿಯ ಈರಮ್ಮ ಭಾವಿ ಎಂಬುವವರ ಎತ್ತುಗಳು ಮೃತಪಟ್ಟಿವೆ. ಹೊಲದಲ್ಲಿ ಕಟ್ಟಿ ಹಾಕಿದ್ದಾಗ ಎತ್ತುಗಳಿಗೆ ಸಿಡಿಲು ಬಡಿದಿದೆ, ಇದರಿಂದ ಸ್ಥಳದಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಕೊನೆಯುಸಿರೆಳೆದಿವೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ಮೇಲೆ ಬಿದ್ದ ಬೃಹತ್ ಮರ, 10 ಪ್ರಯಾಣಿಕರಿಗೆ ಗಾಯ
ಗದಗ: ಬಿರುಗಾಳಿಗ ಸಹಿತ ಮಳೆಗೆ ಚಲಿಸುತ್ತಿದ್ದ ಬಸ್ ಮೇಲೆ ಬಸ್ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ಬಳಿ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣ ಪುಟ್ಟ ಗಾಯವಾಗಿದ್ದವರಿಗೆ ಗಜೇಂದ್ರಗಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಗಜೇಂದ್ರಗಡದಿಂದ ಕಾಲಕಾಲೇಶ್ವರ ಮಾರ್ಗವಾಗಿ ಅಮೀನಗಡಕ್ಕೆ ಹೊರಟಿದ್ದ ಸಾರಿಗೆ ಬಸ್‌ನಲ್ಲಿ ಸುಮಾರು 25 ಜನ ಪ್ರಯಾಣ ಮಾಡುತ್ತಿದ್ದರು. ಅವಘಡದಲ್ಲಿ ಬಸ್ ಸಂಪೂರ್ಣ ಜಖಂ ಆಗಿದೆ.
ಜಮಖಂಡಿಯಲ್ಲಿ ಧಾರಾಕಾರ ಮಳೆ
ಬಾಗಲಕೋಟೆ: ಜಮಖಂಡಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿದವು. ಇದರಿಂದ ರಸ್ತೆಗಳು ಜಲಾವೃತವಾದವು.
ಕೊಡಗಿನ ಹಲವೆಡೆ ಮಳೆ
ಕೊಡಗು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕೊಡಗಿನ ಹಲವೆಡೆ ಮಳೆ ಮುಂದುವರಿದಿದೆ. ಮುಂಜಾನೆಯಿಂದಲೆ ಜಿಲ್ಲೆಯಲ್ಲಿ ಮೋಡ ಕವಿದ ವಾತವರಣ ನಿರ್ಮಾಣವಾಗಿತ್ತು. ಸಂಜೆಯಾಗುತ್ತಲೇ ಮಳೆರಾಯ ಧರೆಗೆ ತಂಪೆರೆದ. ಜಿಲ್ಲೆಯ ಮಡಿಕೇರಿ ಸೇರಿ ವಿವಿಧ ಭಾಗಗಳಲ್ಲಿ ಗುಡುಗುಸಹಿತ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದೆರಡು ದಿನಗಳಿಂದಲೂ ಕೊಡಗಿನಲ್ಲಿ ಮಧ್ಯಾಹ್ನದ ಹೊತ್ತು ನಿರಂತರವಾಗಿ ಮಳೆಯಾಗುತ್ತಿದೆ.