Site icon Vistara News

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ಆರ್ಭಟಿಸಿದ ಮಳೆ; ವಿವಿಧೆಡೆ ಮರಗಳು ನೆಲಕ್ಕುರುಳಿ ವಾಹನಗಳಿಗೆ ಹಾನಿ

Heavy rains in bengaluru

Heavy rains in bengaluru

ಬೆಂಗಳೂರು: ನಗರದಲ್ಲಿ ವಿವಿಧೆಡೆ ಶನಿವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಜತೆಗೆ ಕೆಲವೆಡೆ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ವಿದ್ಯುತ್‌ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ್ದರಿಂದ ವಾಹನಗಳಿಗೆ ಹಾನಿಯಾಗಿದೆ.

ಹೊಸ ಸರ್ಕಾರದ ನೂತನ ಸಾರಥಿಗಳು ಪದಗ್ರಹಣ ಮಾಡಿದ ಬೆನ್ನಲ್ಲೇ ರಾಜಧಾನಿಯಲ್ಲಿ ವರುಣ ಅಬ್ಬರಿಸಿದ್ದಾನೆ. ಗುಡುಗು ಮತ್ತು ಗಾಳಿ ಸಹಿತ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದ್ದು, ವಿವಿಧೆಡೆ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಜನಸಾಮಾನ್ಯರು, ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿ ಮರಗಳು ಉರುಳಿರುವುದು

ಸಂಜೆ ಶುರುವಾದ ಮಳೆಗೆ ನಗರದ ನಾನಾ ಕಡೆಗಳಲ್ಲಿ ಮರಗಳು ಹಾಗೂ ರೆಂಬೆ ಕೊಂಬೆಗಳು ರಸ್ತೆಗೆ ಉರುಳಿ ಜನಸಾಮಾನ್ಯರಿಗೆ ಫಜೀತಿ ತಂದಿಟ್ಟಿತ್ತು. ರೇಸ್‌ಕೋರ್ಸ್‌ ರಸ್ತೆಯಲ್ಲಿ ಬಿರುಸಿನ ಮಳೆಯಿಂದ ಮರ ಬಿದ್ದಿದ್ದರಿಂದ ಕಾರು, ಆಟೋ ಜಖಂಗೊಂಡಿವೆ. ಕಾರ್ಪೊರೇಷನ್ ಬಳಿ ಚಲಿಸುತ್ತಿದ್ದ ಬಸ್ ಮೇಲೆಯೇ ಮರ ಬಿದ್ದು ಆತಂಕಕ್ಕೆ ಕಾರಣವಾಗಿತ್ತಾದರೂ, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಇದನ್ನೂ ಓದಿ | TCS World 10K : ನೂತನ ದಾಖಲೆ ನಿರ್ಮಿಸಲಿದೆ ಟಿಸಿಎಸ್​ 10ಕೆ ಬೆಂಗಳೂರು

ಇನ್ನು ಬಿಬಿಎಂಪಿ ಮುಖ್ಯ ಕಚೇರಿ ಬಳಿಯಲ್ಲೇ ಬೃಹತ್ ಪ್ರಮಾಣದಲ್ಲಿ ಮರದ ಕೊಂಬೆಗಳು ಧರೆಗೆ ಬಿದ್ದ ಹಿನ್ನೆಲೆ ಪಾದಚಾರಿಗಳ ಓಡಾಟಕ್ಕೂ ತೊಂದರೆ ಉಂಟಾಗಿತ್ತು. ಇತ್ತ ಸ್ಥಳದಲ್ಲೇ ಇದ್ದ ಆಟೋ ಮೇಲೆ ಸಹ ಕೊಂಬೆ ಬಿದ್ದು ಟಾಪ್ ಸಂಪೂರ್ಣ ಹಾಳಾಗಿತ್ತು. ಅಲ್ಲದೆ ಗಿರಿ ನಗರದ ನೆಹರು ರಸ್ತೆಯಲ್ಲಿ ಸಹ ಗೂಡ್ಸ್ ವಾಹನದ ಮೇಲೆ ಮರ ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಒಟ್ಟಾರೆ ನಗರದಲ್ಲಿ ಸುರಿದ ಕೇವಲ ಅರ್ಧ ಗಂಟೆಯ ಮಳೆಗೆ ಜನರು ಹೈರಾಣಗಿದ್ದಾರೆ. ಅಲ್ಲಲ್ಲಿ ಜನಜೀವನ ಸಹ ಅಸ್ತವ್ಯಸ್ತ ಉಂಟಾಗಿದೆ..

ಬಿಬಿಎಂಪಿ ಮುಖ್ಯ ಕಚೇರಿ ಆವರಣ

ಒಟ್ಟಿನಲ್ಲಿ ಬಿಬಿಎಂಪಿ ಈಗಲೇ ಎಚ್ಚೆತ್ತುಕೊಂಡು ಮಳೆ ಹಾನಿ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಇದೆ ರೀತಿಯ ಮಳೆ ಮುಂದುವರಿದರೆ ಪ್ರವಾಹ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಇನ್ನೂ ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸಿಲಿಕಾನ್ ಸಿಟಿ ಜನ ಕೊಂಚ ಮುನ್ನೆಚ್ಚರಿಕೆಯಿಂದ ಇರುವುದು ಉತ್ತಮ.

ಇದನ್ನೂ ಓದಿ | Weather Report: ಬೆಂಗಳೂರಿನಲ್ಲಿ ಭರ್ಜರಿ ಮಳೆಗೆ ತಂಪಾದ ಇಳೆ; ಗಾಳಿ-ಗುಡುಗಿನ ಅಬ್ಬರ, ಅಸ್ತವ್ಯಸ್ತವಾಯ್ತು ಸಂಚಾರ

Exit mobile version