ಬೆಂಗಳೂರು: ನಗರದ ವಿವಿಧೆಡೆ ಗುರುವಾರ ಸಂಜೆ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದಾದ ಬಳಿಕ ರಾತ್ರಿ ಕೂಡ ಮೆಜೆಸ್ಟಿಕ್, ಕಾರ್ಪೊರೇಷನ್, ವಿಧಾನಸೌಧ, ವಿಜಯನಗರ, ಜಯನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಇದರಿಂದ ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.
ಇನ್ನು ಕೆ.ಆರ್. ಮಾರ್ಕೆಟ್ ಬಳಿ ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಇದಲ್ಲದೇ ಬೀದಿ ಬದಿ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ಹೈರಾಣಾದರು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಬ್ಲಾಕ್ ಆಗಿದ್ದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು, ಇದರಿಂದ ಮಳೆ ನೀರಿನಲ್ಲೇ ವಾಹನ ಸವಾರರು ತೆರಳುತ್ತಿದ್ದರು.
ಇದನ್ನೂ ಓದಿ | Karnataka Election : ಡಿಕೆ ಶಿವಕುಮಾರ್ ಬಳಿಕ ದೇವೇಗೌಡರಿಗೆ ಹೆಲಿಕಾಪ್ಟರ್ ಕಿರಿಕಿರಿ, ತುರ್ತು ಭೂಸ್ಪರ್ಶ
ಭಾರಿ ಮಳೆಗೆ ಬೈಕ್, ಕಾರುಗಳು ಮುಳುಗಡೆ
ಬೆಂಗಳೂರು: ಗುರುವಾರ ಸಂಜೆ ನಗರದ ವಿವಿಧೆಡೆ ಸುರಿದ ಮಳೆಯಿಂದ ಕೆಲವು ಕಡೆ ಬೈಕ್, ಕಾರುಗಳು ಸೇರಿದಂತೆ ವಾಹನಗಳು ಮುಳುಗಿವೆ. ಮಾಗಡಿ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಮೋರಿ ಒಡೆದ ಪರಿಣಾಮ, ಆ ನೀರು ಮನೆಗಳಿಗೆ ನುಗ್ಗಿದ್ದವು. ಜತೆಗೆ ರಸ್ತೆಯಲ್ಲಿದ್ದ ಬಹುತೇಕ ದ್ವಿಚಕ್ರ ವಾಹನಗಳು ಮುಳುಗಡೆ ಆಗಿದ್ದವು. ಜನರು ಹೊರಗೆ ಬರಲು ಆಗದೆ ಒಳಗೆ ಇರಲು ಆಗದೇ ಅತಂತ್ರಕ್ಕೆ ಸಿಲುಕುವಂತಾಯಿತು.
ಮತ್ತೊಂದು ಕಡೆ ಶಿವಾನಂದ ಸರ್ಕಲ್‌ನಲ್ಲಿ ಮೂರು ಅಡಿಯಷ್ಟು ನೀರು ನಿಂತಿದ್ದರಿಂದ ರಸ್ತೆಯೇ ಕಾಣದಂತಾಗಿ ವಾಹನ ಸವಾರರು ಪರದಾಡಬೇಕಾಯಿತು. ಬಸವನಗುಡಿ, ಟೌನ್ ಹಾಲ್, ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿ ಹಲವೆಡೆ ಭಾರಿ ಮಳೆಯಾಗಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ
ಕೆಂಗೇರಿ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ಮೂವರು ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕಾಗಮಿಸಿ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿದರು. ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಯಿತು.
ಇದನ್ನೂ ಓದಿ | Weather Report: ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ
ಮೋಚಾ ಸೈಕ್ಲೋನ್ ಎಫೆಕ್ಟ್
ಮುಂದಿನ 48 ಗಂಟೆಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಎದುರಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೇ 6 ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಲಿದೆ ಎಂಬ ಮಾಹಿತಿಯಿದ್ದು, ಮೇ 7 ರಂದು ಬಂಗಾಳಕೊಲ್ಲಿ ಹಾಗೂ ಇತರ ಭಾಗಗಳಿಗೆ ಈ ಚಂಡಮಾರುತ ಅಪ್ಪಳಿಸಲಿದೆ ಎನ್ನಲಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ತೀವ್ರತೆ ಹೆಚ್ಚಾದರೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆ ಭಾರಿ ಮಳೆಯಾಗಲಿದೆ.