ಬೆಂಗಳೂರು/ಉಡುಪಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಬ್ರಹ್ಮಾವರ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯೊಂದಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಬಂಧ ಸಂಸ್ಥೆಯು ಸುಮಾರು 3 ಕೋಟಿ ರೂ. ಆರ್ಥಿಕ ಸಹಾಯವನ್ನು ಈಗಾಗಲೇ ಘೋಷಿಸಿದೆ.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಪ್ರಸ್ತುತ 2022-23ನೇ ಸಾಲಿನಲ್ಲಿ ವಿದ್ಯಾರ್ಥಿ ಸಮುದಾಯದ ಹಲವಾರು ಚಟುವಟಿಕೆಗಳಿಗೆ ಈಗಾಗಲೇ 7 ಕೋಟಿ ರೂ. ದೇಣಿಗೆಯನ್ನು ನೀಡಿದೆ. ಉಡುಪಿ ಜಿಲ್ಲೆಯ 350 ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸಾಲಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಿದೆ. ಇವುಗಳ ಮುಂದುವರಿಕೆಯಾಗಿ ಉಡುಪಿಯಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಯಾಗಿ ನೀಡಲು ಸುಮಾರು 41,000 ಜೊತೆ ಶಾಲಾ ಸಮವಸ್ತ್ರಗಳನ್ನು ಸಂಸ್ಥೆ ಈಗಾಗಲೇ ಖರೀದಿಸಿದೆ.
ಇವುಗಳ ವಿತರಣೆ ಕಾರ್ಯಕ್ರಮವನ್ನು ಜು.8 ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಸಂಸ್ಥೆಯು ಪ್ರಥಮವಾಗಿ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ನೀಡುತ್ತಿದೆ. ಉಡುಪಿಯ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಮುರಲಿ ಕಡೆಕಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರ ಪ್ರಸ್ತಾವಿಕ ನುಡಿ ಇರಲಿದೆ. ಇವರೊಂದಿಗೆ ಮಾಜಿ ಸಚಿವ ಸುನಿಲ್‌ಕುಮಾರ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ.ಸುವರ್ಣ, ಗುರುರಾಜ ಎಸ್ ಗಂಟಿಹೊಳೆ ಭಾಗಿಯಾಗಲಿದ್ದಾರೆ. ಜತೆಗೆ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹಾಗೂ ಉಡುಪಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ ಉಪಸ್ಥಿತರಿಲಿದ್ದಾರೆ.
ಏನಿದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ
ಶಾಲಾ ಶಿಕ್ಷಕ ದಿವಂಗತ ಹೆಗ್ಗುಂಜೆ ರಾಜೀವ ಶೆಟ್ಟಿಯವರ ನೆನಪಿನಲ್ಲಿ ಇವರ ಪುತ್ರ ಎಚ್ ಎಸ್ ಶೆಟ್ಟಿಯವರು 2008ರಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿಯನ್ನು ಸ್ಥಾಪಿಸಿದರು. ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ ನೆರವಿನೊಂದಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿಯು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಸೊಸೈಟಿಯು ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಉಚಿತ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ, ಮಧ್ಯಾಹ್ನ ಊಟಕ್ಕೆ ದೇಣಿಗೆ ಹಾಗೂ ಶಾಲಾ ಕಂಪ್ಯೂಟ್ ಲ್ಯಾಬ್‌ಗಳ ವ್ಯವಸ್ಥೆಯನ್ನು ನೀಡುತ್ತಿದೆ. ಮಾತ್ರವಲ್ಲದೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಬಡ ಮತ್ತು ನಿರ್ಗತಿಕರಿಗೆ ವೈದ್ಯಕೀಯ ನೆರವು ನೀಡುವುದು. ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳ ದಾನವನ್ನು ಮಾಡಿದ್ದಾರೆ.
ಇದನ್ನೂ ಓದಿ: ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ನಾ. ಡಿಸೋಜ ಹಾಗೂ ದು. ಸರಸ್ವತಿ ಆಯ್ಕೆ
ಹಾಲಾಡಿಯ ಸರ್ಕಾರಿ ಪ್ರೌಢಶಾಲೆ ವಿಭಾಗವನ್ನು ಒಳಗೊಂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲ ಸೌಕರ್ಯಗಳ ಅಭಿವೃದ್ಧಿ, ಭಂಡಾಕರ್ಸ್ ಕಾಲೇಜಿನ ಅಹರ್ಗ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 10 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದಾರೆ. ಇದೇ ಕಾಲೇಜಿನ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 1 ಲಕ್ಷ ರೂ. ದೇಣಿಗೆ ಹಾಗೂ ಉಡುಪಿಯ ನಿಟ್ಟೂರು ಎಜುಕೇಷನ್ ಅಧೀನದ ನಿಟ್ಟೂರು ಅನುದಾನಿತ ಪ್ರೌಢಶಾಲೆಯ ಸಭಾಗಂಣ ನಿರ್ಮಾಣಕ್ಕೆ 1 ಕೋಟಿ ರೂ. ಆರ್ಥಿಕ ಸಹಾಯವನ್ನು ಕೈಗೊಂಡಿದೆ. ಯಲ್ಲಾಪುರದ ವಿಶ್ವ ದರ್ಶನ ಎಜುಕೇಷನ್ ಸೊಸೈಟಿಗೆ ವಿದ್ಯಾರ್ಥಿ ವಸತಿಗೃಹ ನಿರ್ಮಾಣ ಮಾಡಲು 2 ಕೋಟಿ ರೂ. ಆರ್ಥಿಕ ಸಹಾಯವನ್ನು ಸಂಸ್ಥೆ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ