Site icon Vistara News

BK Hariprasad : ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ; ನಾನೇನು ಮಾತನಾಡಲ್ಲ, ಮಾತನಾಡಿದ್ರೆ ನೋಟಿಸ್‌ ಕೊಡ್ತಾರೆ!

BK Hariprasad and congress

ನವ ದೆಹಲಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ (Neglecting Lingayats) ಮತ್ತು ಲಿಂಗಾಯತರು ಸಿಎಂ (Lingayat CM Demdand) ಆಗಬೇಕು. ಅಲ್ಲದೆ, ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿದೆ ಎಂಬ ಲಿಂಗಾಯತ ಸಮುದಾಯದ (Lingayat community) ಹಿರಿಯ ನಾಯಕ, 92 ವರ್ಷದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಮಾತು ಈಗ ರಾಜಕೀಯವಾಗಿ ತಿರುಗಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (BK Hariprasad) ನಿರಾಕರಿಸಿದ್ದಾರೆ. ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ. ನಾನೇದರೂ ಮಾತನಾಡಿದರೆ ನೋಟಿಸ್‌ ಕೊಡುತ್ತಾರೆ ಎಂದು ಹೇಳಿದ್ದಾರೆ.

ಸದಾ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿರುವ ಬಿ.ಕೆ. ಹರಿಪ್ರಸಾದ್‌ ಅವರು ಈಗ ಶಾಮನೂರು ಶಿವಶಂಕರಪ್ಪ ವಿರುದ್ಧ ಯಾವುದೇ ಮಾತುಗಳನ್ನಾಡದೆ ಅಚ್ಚರಿ ಮೂಡಿಸಿದ್ದಾರೆ. “ತಮಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದೂ ಗೊತ್ತು, ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದೂ ಗೊತ್ತು” ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಬಿ.ಕೆ. ಹರಿಪ್ರಸಾದ್‌ ಅವರು ಈಗ ಮಾತ್ರ “ಸಿಎಂ ಬದಲಾವಣೆ” ಬಗ್ಗೆ ಶಾಮನೂರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ.

ಇದನ್ನೂ ಓದಿ: Karnataka Politics : ರಾಜ್ಯ ಸರ್ಕಾರ ಪತನಕ್ಕೆ ಮೂವರು ನಾಯಕರ ಮೆಗಾ ಪ್ಲ್ಯಾನ್!

ಬಿ.ಕೆ. ಹರಿಪ್ರಸಾದ್‌ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದೆ. ಅಲ್ಲದೆ, ಲಿಂಗಾಯತ ಸಿಎಂ ಅಧಿಕಾರವನ್ನು ಹಿಡಿಯಬೇಕು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಅವರು ಹಿರಿಯರು, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ ಇದೆ. ಅದಕ್ಕೆ ನಾನೇನಾದರೂ ಮಾತನಾಡಿದರೆ ನೋಟಿಸ್ ನೀಡುತ್ತಾರೆ. ದೆಹಲಿಯಲ್ಲಿ ಕೆಲಸ ಇತ್ತು. ಹೀಗಾಗಿ ಇಲ್ಲಿಗೆ ಬಂದಿದ್ದೇನಷ್ಟೇ ಎಂದು ಉತ್ತರಿಸಿದ್ದಾರೆ.

ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ

ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿ (Caste Census Report) ಅಂಗೀಕಾರ ಒತ್ತಾಯ ಕೇಳಿಬಂದಿದೆ. ಸಿದ್ದರಾಮಯ್ಯ ಅವರ ಈ ಹಿಂದಿನ ಅಧಿಕಾರವಧಿಯಲ್ಲಿ ನಡೆದಿದ್ದ ಜಾತಿಗಣತಿ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಈಗ ಇದನ್ನು ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ರಾಜ್ಯ ಸರ್ಕಾರದ ವಿರುದ್ಧ ಒಂದಲ್ಲ ಒಂದು ವಿಷಯಗಳ ಬಗ್ಗೆ ಹರಿಹಾಯುತ್ತಲೇ ಬರುತ್ತಿರುವ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (MLC and senior Congress leader BK Hariprasad) ಈಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಕಾಂತರಾಜು ನೇತೃತ್ವದ ಸಮಿತಿಯು (Committee headed by Kantharaju) 2018ರಲ್ಲಿ ಜಾತಿಗಣತಿ ವರದಿಯನ್ನು ಸಿದ್ಧಪಡಿಸಿತ್ತು. ಆದರೆ, 2019ರಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ (Congress JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು.

ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಹೀಗಾಗಿ ಈಗ ಜಾರಿಗೆ ತರಲೇಬೇಉ ಎಂದು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಒತ್ತಡ ಹಾಕಿದ್ದಾರೆ. ಆದರೆ, ಈ ವರದಿಗೆ ಮೇಲ್ಜಾತಿಯ ಸಮುದಾಯಗಳ ವಿರೋಧ (Opposition from upper caste communities) ಇದೆ ಎಂದು ವರದಿ ಅಂಗೀಕರಿಸಲು ಹಿಂದೇಟು ಹಾಕಲಾಗುತ್ತಿದೆ.

ಈ ವರದಿ ಅಂಗೀಕರಿಸಿದರೆ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್ ವಿರುದ್ಧ ಪ್ರಬಲ ಸಮುದಾಯಗಳು ನಿಂತುಕೊಳ್ಳುವ ಭಯ ಕಾಡುತ್ತಿದೆ. ಈ ವರದಿಯಲ್ಲಿ ಮುಸ್ಲಿಂ ಸಮುದಾಯ (Muslim community), ದಲಿತ ಸಮುದಾಯ, ಲಿಂಗಾಯತ ಸಮುದಾಯ (Lingayat community) ಬಳಿಕ ಕುರುಬ ಸಮುದಾಯದವರು (Kuruba community) ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಬಲ ಸಮುದಾಯಗಳ ಉಲ್ಲೇಖ

ಅಲ್ಲದೆ, ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯಗಳ ಬಗ್ಗೆ ಸಹ ಮಾಹಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಿಂದ ಆಗುವ ಲಾಭಕಿಂತಲೂ ಕಾಂಗ್ರೆಸ್‌ಗೆ ನಷ್ಟವೇ ಜಾಸ್ತಿ ಎಂದು ಹಲವರು ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ಈ ವರದಿ ಅಂಗೀಕರಿಸಲು ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈಗ ಸ್ವತಃ ಬಿ.ಕೆ. ಹರಿಪ್ರಸಾದ್‌ ಹೇಳಿಕೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಟ್ವೀಟ್‌ ಮಾಡಿರುವ ಬಿ.ಕೆ. ಹರಿಪ್ರಸಾದ್

ಕಾಂತರಾಜ್ ವರದಿ ಜಾರಿ ಮಾಡಲು ಸರ್ಕಾರಕ್ಕೆ ‌ಒತ್ತಾಯ ಮಾಡಿರುವ ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕು ಎಂದು ಟ್ವೀಟ್ ಮಾಡಿ ಒತ್ತಡ ಹೇರಿದ್ದಾರೆ.

ಹರಿಪ್ರಸಾದ್‌ ಟ್ವೀಟ್‌ನಲ್ಲೇನಿದೆ?

“ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಧ್ವನಿ ಎತ್ತಿದ್ದಾರೆ.

ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕಿದೆ.

“ಇಂಡಿಯಾ” ಮೈತ್ರಿಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ನಡೆ ತೋರಿದ್ದು, ಅಭಿನಂದನೀಯ.

ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದು ಬಿ.ಕೆ. ಹರಿಪ್ರಸಾದ್‌ ಟ್ವೀಟ್‌ ಮೂಲಕ ಹೇಳಿದ್ದಾರೆ.

ಬಿಹಾರ ಸಿಎಂಗೆ ನನ್ನ ಧನ್ಯವಾದ

ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕಾಗಿ ಅಲ್ಲಿನ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಜಾತಿಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿ ಅವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ತಪ್ಪು – ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆಯೋ? ಇಲ್ಲವೋ? ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಣ ಖರ್ಚು ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ಚರ್ಚೆಗೆ ಅವಕಾಶ ನೀಡಬೇಕು.

ರಾಜ್ಯದಲ್ಲಿ ಯಾವಾಗ ಬಿಡುಗಡೆ ಮಾಡುತ್ತಾರೆಯೋ ಅದನ್ನು ಸರ್ಕಾರ ಕೇಳಬೇಕು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ. ಯಾವುದೇ ಜಾತಿ ಒತ್ತಡ ಹೇರಲಿ, ಮೊದಲು ಬಿಡುಗಡೆ ಮಾಡಬೇಕು. ಆಮೇಲೆ ಯಾರಿಗಾದರೂ ಅನ್ಯಾಯವಾದರೆ ಸರಿ ಮಾಡಬಹುದು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿ ಆಗಬೇಕು ಎಂದಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ

ಜಾತಿ ಗಣತಿಯನ್ನು ಬಿಡುಗಡೆ ಮಾಡಬೇಕು ಎಂಬ ನನ್ನ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ಟಾರ್ಗೆಟ್ ಮಾಡುವುದು ಏನಿಲ್ಲ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

Exit mobile version