ಬೆಂಗಳೂರು: ಮಳಲಿ ಮಸೀದಿ ಸ್ಥಳದಲ್ಲಿ ದೇವಸ್ಥಾನವಿತ್ತು ಎಂಬ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈಗಾಗಲೆ ವಿಚಾರಣೆ ಪೂರ್ಣಗೊಂಡಿರುವ ಪ್ರಕರಣದಲ್ಲಿ, ಹೈಕೋರ್ಟ್‌ನಲ್ಲಿ ವಿಚಾರಣೆ ಪೂರ್ಣವಾಗುವವರೆಗೂ ಯಾವುದೇ ತೀರ್ಪು ನೀಡಬಾರದು ಎಂದು ಮಂಗಳೂರು ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ನವೀಕರಣ ವೇಳೆ ಹಿಂದೂ ದೇಗುಲದ ಮಾದರಿ ಪತ್ತೆಯಾಗಿತ್ತು. ನವೀಕರಣಕ್ಕೆ ತಡೆ ನೀಡಿ ಸಂಪೂರ್ಣ ಸರ್ವೆ ಮಾಡಲು ಹಿಂದು ಸಂಘಟನೆಗಳು ಕೋರ್ಟ್ ಮೊರೆ ಹೋಗಿದ್ದವು. ಆದರೆ ವಿಶ್ವ ಹಿಂದು ಪರಿಷತ್ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮಸೀದಿ ಆಡಳಿತ ಮಂಡಳಿ ಮಂಗಳೂರು ಕೋರ್ಟ್ ಮೊರೆ ಹೋಗಿತ್ತು.
ವಕ್ಫ್ ಬೋರ್ಡ್ ಕಾಯ್ದೆ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯಡಿ ಅರ್ಜಿಯನ್ನು ವಜಾ ಮಾಡುವಂತೆ ಕೋರಿತ್ತು. ಈ ಕುರಿತು ಮೇ 31ಕ್ಕೆ ವಿಚಾರಣೆ ಆರಂಭಿಸಿದ ನ್ಯಾಯಾಲಯ ಎರಡೂ ಕಡೆಯ ವಾದವನ್ನು ಆಲಿಸಿ ಜೂನ್ 14ಕ್ಕೆ ತೀರ್ಪನ್ನು ಘೋಷಣೆ ಮಾಡುವುದಾಗಿ ಕಾಯ್ದಿರಿಸಿತ್ತು. ಈ ನಡುವೆ ಹಿಂದುಪರ ಸಂಘಟನೆಗಳು ಹೈಕೋರ್ಟ್ ಮೊರೆ ಹೋಗಿದ್ದವು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆದಾಗ ವಿಶ್ವ ಹಿಂದೂ ಪರಿಷತ್‌ಪರ ವಕೀಲ, ಮಳಲಿ ಮಸೀದಿ ವಕ್ಫ್ ಆಸ್ತಿ ಎಂದು ಹೇಳಿದರೆ ಸಾಲದು, ಅದಕ್ಕೆ ಪೂರಕ ಸಾಕ್ಷ್ಯಗಳನ್ನು ಕೋರ್ಟ್‌ಗೆ ನೀಡಬೇಕು. ಆ ಬಳಿಕ ನ್ಯಾಯಾಲಯ ತೀರ್ಪು ನೀಡಿದರೆ ಒಪ್ಪಬಹುದು ಎಂದು ವಾದ ಮಂಡಿಸಿದ್ದರು.
ಇನ್ನು ಮಸೀದಿ ಆಡಳಿತ ಮಂಡಳಿ ಪರ ವಕೀಲ ವಾದ ಮಂಡಿಸಿ, ಪ್ರಕರಣವೊಂದರ ಸಂಬಂಧ ದೆಹಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ರಾಜ್ಯ ಸರ್ಕಾರ ನೀಡುವ ಗೆಜೆಟ್ ನೋಟಿಫಿಕೇಶನ್ ಅಂದರೆ ಅದು ನ್ಯಾಯಾಲಯದ ಆದೇಶಕ್ಕೆ ಸಮನಾಗಿದೆ. ಆದ್ದರಿಂದ ಮಸೀದಿ ವಕ್ಫ್ ಆಸ್ತಿಯೋ ಅಲ್ಲವೋ ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ. ಮಸೀದಿಯ ರಚನೆ, ಅದರಲ್ಲಿ ಸಂಬಂಧಿಸಿದ ಕಾರ್ಯಗಳು ನಡೆಯುತ್ತಿದ್ದರೆ ಅದು ವಕ್ಫ್ ಆಸ್ತಿಯಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದ್ದರು.
ಎರಡೂ ಕಡೆಯ ವಕೀಲರ ವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತ್ತು. ಹೀಗಾಗಿ ಹೈಕೋರ್ಟ್‌ನಲ್ಲಿ ವಿಚಾರಣೆ ಸಂಪೂರ್ಣ ಮುಗಿಯುವವರೆಗೂ ಯಾವುದೇ ಆದೇಶವನ್ನು ನೀಡಬಾರದು ಎಂದು ಮಂಗಳೂರು ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ | ಮಳಲಿ ಮಸೀದಿ ವಿವಾದದ ಸೌಹಾರ್ದ ಇತ್ಯರ್ಥಕ್ಕೆ ಹಿಂದೂ-ಮುಸ್ಲಿಂ ಮುಖಂಡರ ನಿರ್ಧಾರ