ಬೆಂಗಳೂರು: ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ (Highway Road) ನಡೆಯುವ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ನಾನಾ ತಂತ್ರವನ್ನು ರೂಪಿಸುತ್ತಿದೆ. ಇದೀಗ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಅತಿ ವೇಗ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ (Traffic Rules) ಮೇಲೆ ಕ್ಯಾಮೆರಾ ಕಣ್ಗಾವಲಿನ ಮೂಲಕ ದಂಡ ಪ್ರಾಯೋಗಿಸಲು ಮುಂದಾಗಿದೆ.
ಇತ್ತೀಚೆಗೆ ಹೆದ್ದಾರಿಗಳಲ್ಲಿ ಸಾವು-ನೋವು ಹೆಚ್ಚಾಗಿ ವರದಿಯಾಗುತ್ತಿದೆ. ಇತ್ತ ಸಾರಿಗೆ ಇಲಾಖೆಯು ಅಪಘಾತಗಳ ಪ್ರಮಾಣ ತಗ್ಗಿಸಲು ಮತ್ತು ವಾಹನ ಸವಾರರ ಸುರಕ್ಷತೆಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ. ಅದರಲ್ಲೂ ಅಪಘಾತದ ಪ್ರಮಾಣ ಹೆಚ್ಚಿರುವ ಹೆದ್ದಾರಿಗಳನ್ನೇ ಆಯ್ಕೆ ಮಾಡಿಕೊಂಡು ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಹಾಕಲು ತಯಾರಿ ನಡೆದಿದೆ. ಪ್ರಾಯೋಗಿಕವಾಗಿ ರಾಜ್ಯದ ಆರು ಹೆದ್ದಾರಿಗಳಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ಈ ವ್ಯವಸ್ಥೆ ಜಾರಿಯಾಗಲಿದೆ. ಇದು ಯಶಸ್ಸು ಕಂಡರೆ ಇತರೆ ಹೆದ್ದಾರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.
ಡಿಜಿಟಲ್ ಡಿಸ್‌ಪ್ಲೇ ಬೋರ್ಡ್
ಸಂಚಾರ ನಿಯಮ ಉಲ್ಲಂಘನೆಯ ಪರಿಶೀಲನೆಗಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಚಾಲಕರ ಅನುಕೂಲಕ್ಕಾಗಿ ವಾಹನಗಳ ವೇಗದ ವಿವರದ ಪ್ರದರ್ಶನಕ್ಕೆ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನ ವ್ಯವಸ್ಥೆ ಮಾಡಲಾಗುತ್ತದೆ. ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಮತ್ತು ಎಐ ಕ್ಯಾಮೆರಾಗಳ ನಡುವೆ ಸಂಪರ್ಕವಿರುತ್ತದೆ. ಎಐ ಕ್ಯಾಮೆರಾಗಳು ವಾಹನಗಳ ವೇಗ, ಪಥ ಶಿಸ್ತು ಉಲ್ಲಂಘನೆ, ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದೃಶ್ಯಾವಳಿಯನ್ನು ವಾಹನದ ನೋಂದಣಿ ಸಂಖ್ಯೆ ಸಮೇತ ಸೆರೆ ಹಿಡಿಯಲಿದೆ.
ಇದನ್ನೂ ಓದಿ: Karnataka Weather Forecast : ನಾಳೆ ದಕ್ಷಿಣದಲ್ಲಿ ದುರ್ಬಲ; ಉತ್ತರ, ಕರಾವಳಿಯಲ್ಲಿ ಸಾಮಾನ್ಯ ಮಳೆ
ಧ್ವನಿ ವರ್ಧಕ ಮೂಲಕ ಅಲರ್ಟ್
ಸುಧಾರಿತ ತಂತ್ರಜ್ಞಾನದ ಎಐ ಕ್ಯಾಮೆರಾಗಳು ಸುಮಾರು 200 ಮೀಟರ್ ದೂರದವರೆಗೂ ವಾಹನಗಳ ದೃಶ್ಯಾವಳಿ ಸೆರೆ ಹಿಡಿಯಬಲ್ಲವು. ವಾಹನ ಎಷ್ಟು ವೇಗದಲ್ಲಿ ಸಂಚರಿಸುತ್ತಿದೆ? ಯಾವ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂಬ ವಿವರ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಪ್ರದರ್ಶನವಾಗುತ್ತದೆ. ಮಾತ್ರವಲ್ಲದೆ ಆ ವಿವರ ಧ್ವನಿ ವರ್ಧಕದಲ್ಲೂ ಕೇಳಿಬರಲಿದೆ. ಅಲ್ಲದೆ, ಸಂಚಾರ ನಿಯಮ ಪಾಲಿಸುವಂತೆ ಜಾಗೃತಿಯ ಸಂದೇಶ ನೀಡಲಾಗುತ್ತದೆ.
ಎಐ ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಯ ವೆಬ್ ಆಧಾರಿತ ಸಾರಥಿ-4 ಮತ್ತು ವಾಹನ್-4 ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಕ್ಯಾಮೆರಾಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸೆರೆಯಾದ ತಕ್ಷಣ ಸಂಚಾರ ನಿಯಮ ಉಲ್ಲಂಘನೆಯ ಸಂಪೂರ್ಣ ವಿವರವು ಇಲಾಖೆ ಸಿಬ್ಬಂದಿಗೆ ಬೆರಳ ತುದಿಯಲ್ಲೇ ಸಿಗಲಿದೆ.
ಹೀಗಾಗಿ ಡಿಎಲ್, ಎಫ್.ಸಿ, ವಿಮೆ ಸೇರಿದಂತೆ ಇತರೆ ದಾಖಲೆಗಳು ಚಾಲ್ತಿಯಲ್ಲಿವೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ತೆರಿಗೆ ಬಾಕಿ ವಿವರವೂ ತಿಳಿಯಲಿದೆ. ಜತೆಗೆ ಹಿಂದಿನ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿಯೂ ಸಿಗುತ್ತದೆ. ಈ ವಿವರದ ಆಧಾರದಲ್ಲಿ ಸಿಬ್ಬಂದಿ ಪಿಡಿಎ (ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್) ಉಪಕರಣಗಳ ಮೂಲಕ ದಂಡ ವಿಧಿಸುತ್ತಾರೆ. ಅಲ್ಲದೆ, ಇ-ಚಲನ್ ವ್ಯವಸ್ಥೆಯಡಿ ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಾರೆ.
ಯಾವ್ಯಾವ ಹೈವೇಯಲ್ಲಿ ಕ್ಯಾಮೆರಾ ಕಣ್ಣು?
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ
ತುಮಕೂರಿನ ಕ್ಯಾತ್ಸಂದ್ರ
ಹೊಸೂರು ರಸ್ತೆಯ ಅತ್ತಿಬೆಲೆ
ರಾಷ್ಟ್ರೀಯ ಹೆದ್ದಾರಿ 4ರ ಪಾರ್ಲೆಜಿ ಫ್ಯಾಕ್ಟರಿ
ರಾಷ್ಟ್ರೀಯ ಹೆದ್ದಾರಿ 73ರ ಹಿಟ್ನಾಳ ಟೋಲ್‌ಗೇಟ್
ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೋಲ್‌ಗೇಟ್
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ