ಬೆಂಗಳೂರು: ಇಲ್ಲಿನ ಆರ್.ಆರ್.ನಗರದ ಗಿರಿಧಾಮದ ಬಳಿ ಬೃಹತ್ ಬೆಟ್ಟವೊಂದು ಕುಸಿದು (Hill Fall) ಬಿದ್ದಿದೆ. ಕಳೆದ ಬುಧವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರ್.ಆರ್ ನಗರದ ಗಿರಿಧಾಮ ಲೇಔಟ್‌ನ ಜನರಲ್ಲಿ ಆತಂಕ ಹೆಚ್ಚಾಗಿದೆ.
ಮಳೆಯ ಕಾರಣಕ್ಕೆ ಈ ರೀತಿ ಆಗಿದೆಯೇ ಅಥವಾ ಬೇರೆ ಕಾರಣವೇನಾದಾರೂ ಇದೆಯೇ ಎಂಬ ಆತಂಕ ಎದುರಾಗಿದ್ದು, ಸರ್ಕಾರ ಸೂಕ್ತ ಅಧ್ಯಯನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ. ಆದರೆ, ಇಲ್ಲಿನ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿಂದೆ ಸರಿಯುತ್ತಿರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.
ಇಲ್ಲಿ ಮೊದಲು ದೊಡ್ಡ ಶಬ್ಧವೊಂದು ಕೇಳಿಬಂದಿದ್ದು, ಮೊದಮೊದಲು ಭೂಕಂಪವೆಂದು ಹೆದರಿ ಜನರು ಹೊರ ಬಂದಿದ್ದಾರೆ. ಆ ಬಳಿಕ ಬೆಟ್ಟದಿಂದ ಬಂಡೆ ಕುಸಿದಿದೆ ಎಂಬುದು ತಡವಾಗಿ ತಿಳಿದು ಬಂದಿದೆ.
ಈಗಾಗಲೇ ಸ್ಥಳೀಯರು ಬಿಬಿಎಂಪಿ, ಬೆಸ್ಕಾಂ ಇಲಾಖೆಗಳಿಗೆ ದೂರು ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಜಾರಿಕೊಂಡಿದ್ದಾರೆ. ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ಸ್ಥಳ ಇದಾಗಿದ್ದು, ಯಾವ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದ ಕಾರಣ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.
ಬೆಟ್ಟದ ಮೇಲೆ ಸಾಕಷ್ಟು ಬಂಡೆ ಕಲ್ಲು ಇರುವುದರಿಂದ ಮತ್ತಷ್ಟು ಉರುಳಿ ಬೀಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ವೃದ್ಧರು, ಮಕ್ಕಳು ಇರುವುದರಿಂದ ಬಂಡೆ ಕಲ್ಲು ಜಾರಿ ಮನೆಗೆ ಬೀಳುವ ಭೀತಿ ಹೊರಹಾಕಿದ್ದಾರೆ.
ಇದನ್ನೂ ಓದಿ | ಕುಸಿಯುತ್ತಿದೆ ಬೆಟ್ಟ, ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗುವ ಸಾಧ್ಯತೆ