ಬೆಂಗಳೂರು: ರಾಷ್ಟ್ರೀಯ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿರುವ ಜೆಡಿಎಸ್ ಅದರ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಈ ನಡುವೆ ಹಿಂದಿ ದಿವಸ್ ವಿರುದ್ದ ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿ ಧರಿಸಿಕೊಂಡು ಅಧಿವೇಶನಕ್ಕೆ ಬಂದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಇತರರನ್ನು ಮಾರ್ಷಲ್‌ಗಳು ತಡೆದಿದ್ದಾರೆ. ಶಾಸಕರ ಕೈಯಲ್ಲಿದ್ದ ಪಟ್ಟಿಯನ್ನು ಮಾರ್ಷಲ್‌ಗಳು ಬಿಚ್ಚಿದರೆ, ಕುಮಾರಸ್ವಾಮಿ ಅವರು ತಾವೇ ಕಚೇರಿಗೆ ಹೋಗಿ ಬಿಚ್ಚಿಟ್ಟು ಒಳ ಪ್ರವೇಶ ಮಾಡಿದರು.
ಪ್ರವೇಶಕ್ಕೆ ಮೊದಲು ಎಚ್‌ಡಿಕೆ ಹೇಳಿದ್ದೇನು?
ʻʻಕೇಂದ್ರದ ಗೃಹ ಸಚಿವರು ಪದೇಪದೆ ಹಿಂದಿ ಭಾಷೆ ಹೇರುವ ಅರ್ಥದಲ್ಲಿ ಮಾತನಾಡುತ್ತಾರೆ. ಈ ಹಿಡನ್ ಅಜೆಂಡಾ ವಿರುದ್ಧ ನಮ್ಮ ಪ್ರತಿಭಟನೆ. ಒಂದು ರಾಷ್ಟ್ರ ಒಂದು ಭಾಷೆ ಮಾಡುವ ಪ್ರಯತ್ನವೊಂದು ನಡೆದಿದೆ. ಭಾವನಾತ್ಮಕ ವಿಷಯಗಳ ಮೂಲಕ ಕನ್ನಡಿಗರ ಕೆಣಕಲಾಗುತ್ತಿದೆ.ʼʼ ಎಂದು ಕುಮಾರಸ್ವಾಮಿ ವಿಧಾನಸೌಧ ಪ್ರವೇಶಕ್ಕೆ ಮುನ್ನ ಹೇಳಿದರು.
ʻʻಉತ್ತರ ಭಾರತದಲ್ಲೂ ಎಲ್ಲ ರಾಜ್ಯಗಳಲ್ಲಿ ಹಿಂದಿ ಭಾಷೆ ಇಲ್ಲ. ಅಲ್ಲಿ ಆಯಾ ರಾಜ್ಯದ ಭಾಷೆಗಳೇ ಇವೆ. ಹಾಗಿರುವಾಗ ಇವರು ಭಾಷೆಯ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ದೇಶದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಇವರ ರಕ್ಷಣೆ ಬರದ ಸರ್ಕಾರಗಳು, ಭಾಷೆಯ ವಿಷಯದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಧಿಕ್ಕಾರʼʼ ಎಂದರು.
ಮಾರ್ಷಲ್‌ಗಳಿಂದ ಜೆಡಿಎಸ್ ಶಾಸಕರಿಗೆ ತಡೆ
ಈ ನಡುವೆ ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಶಾಸಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಗಮಿಸಿದ್ದರು. ಆದರೆ, ಗೇಟ್ ಬಳಿ ಶಾಸಕರನ್ನು ಮಾರ್ಷಲ್‌ಗಳು ತಡೆದರು. ಆಗ ಕುಮಾರಸ್ವಾಮಿ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲೇ ಕಪ್ಪು ಪಟ್ಟಿ ಬಿಚ್ಚಿಟ್ಟು ಒಳಗೆ ಹೋದರು.
ಜೆಡಿಎಸ್ ಶಾಸಕರನ್ನು ತಡೆದ ಬಳಿಕ ಅಲ್ಲಿಗೆ ಕುಮಾರಸ್ವಾಮಿ ಬಂದರು. ಅವರನ್ನು ನೋಡಿದ ತಕ್ಷಣ ಮಾರ್ಷಲ್‌ಗಳು ಗಲಿಬಿಲಿಗೊಂಡರು. ʻʻಸರ್ ಕಪ್ಪು ಪಟ್ಟಿ ಧರಿಸಬೇಡಿʼʼ ಎಂದು ಮನವಿ ಮಾಡಿದರು. ಆಗ ಕುಮಾರಸ್ವಾಮಿ ʻʻನಾನು ಕಪ್ಪು ಪಟ್ಟಿ ಧರಿಸಿಲ್ಲ, ನಿಯಮ ಉಲ್ಲಂಘನೆ ಮಾಡಲ್ಲʼʼ ಎಂದು ಹೇಳಿದರು. ಕುಮಾರಸ್ವಾಮಿ ಅವರು ಒಳ ಪ್ರವೇಶಿಸಿದ ಮೇಲೂ ಅವರ ಆಪ್ತ ಕಾರ್ಯದರ್ಶಿಗಳನ್ನು ಮಾರ್ಷಲ್‌ಗಳು ತಪಾಸಣೆಗೆ ಒಳಪಡಿಸಿದರು.