ಬೆಂಗಳೂರು: ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣಗಳ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದ್ದು ಈ ಸಂಬಂಧ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಮುಂದೆ ಹಕ್ಕೊತ್ತಾಯ ಮಂಡಿಸಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅಭಿನವ ಹಾಲಸ್ವಾಮಿ ಅವರು ವಿವಿಧ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯಂತೆ ಹಿಂದೂ ಕಾರ್ಯಕರ್ತರಿಗೂ ಮೀಸಲಾತಿ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 25 ಹಿಂದೂ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬಿಜೆಪಿ ಸರ್ಕಾರಕ್ಕೆ ಆಜಾನ್, ಗೋಹತ್ಯೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಿಡಿ ಕಾರಿದರು. ʻʻಮತಾಂತರ ನಿಷೇಧ ಕಾಯಿದೆ ಇದ್ದರೂ ಈಗಲೂ ಮತಾಂತರ ಆಗ್ತಿದೆ. ಹಿಂದೂ ಹೋರಾಟಗಾರರು ಶಾಸಕರಾದರೆ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತಾರೆ. ಹೀಗಾಗಿ ಹಿಂದೂಪರ ಹೋರಾಟಗಾರರಿಗೆ ಟಿಕೆಟ್ ಸಿಗ್ಬೇಕು. ಈ ಸಂಬಂಧ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಈ ಸಂಬಂಧ ಸರ್ಕಾರ ಪ್ರತಿಕ್ರಿಯೆ ನೀಡಲು ವಿಜಯ ದಶಮಿಯವರೆಗೂ ಕಾಲಾವಕಾಶ ನೀಡುತ್ತೆವೆ. ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಟಿಕೆಟ್ ಆಕಾಂಕ್ಷಿಗಳಲ್ಲಿ ಮಠಾಧೀಶರು ಇರಬಹುದು. ಒಟ್ಟಿನಲ್ಲಿ ಹಿಂದೂ ಪರ ಹೋರಾಟಗಾರರಿಗೆ ಟಿಕೆಟ್ ನೀಡಬೇಕು ಎನ್ನುವುದು ತಮ್ಮ ವಾದ ಎಂದರು. ವಿಶ್ವ ಹಿಂದೂ ಪರಿಷತ್ ನ ಭಾಸ್ಕರನ್, ಪ್ರಶಾಂತ್ ಸಂಬರಗಿ, ಪುನೀತ್ ಕೆರೆಹಳ್ಳಿ ಕೂಡಾ ಭಾಗಿಯಾಗಿದ್ದರು.
ಇದನ್ನೂ ಓದಿ| Pramod Muthalik : ಕೈ ಕತ್ತರಿಸುತ್ತೇವೆಂದು ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?