ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಹಿಂದು ಜನಜಾಗೃತಿ ಸಮಿತಿಯಿಂದ ರಾಮರಾಜ್ಯದ ಪ್ರತಿಜ್ಞೆಯೊಂದಿಗೆ ಜ. 15ರಿಂದ 21ರವರೆಗೆ ಕರ್ನಾಟಕ ಸೇರಿ ದೇಶದಾದ್ಯಂತ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೂರಾರು ವರ್ಷಗಳ ನಿರೀಕ್ಷೆ ನಂತರ ಜನವರಿ 22 ರಂದು ಅಯೋಧ್ಯೆಯ ಪವಿತ್ರ ಶ್ರೀ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನು ಪುನಃ ಅವತರಿಸುತ್ತಿದ್ದಾನೆ. ಇದು ರಾಮಭಕ್ತರಿಗೆ ಅತ್ಯಂತ ಆನಂದ ಹಾಗೂ ಹರ್ಷದ ಕ್ಷಣ. ಈ ಸಮಯದಲ್ಲಿ ಪ್ರಭು ಶ್ರೀರಾಮನ ನಾಮಜಪ ಮಾಡಿ ಅವರ ಭಕ್ತಿಯನ್ನು ಮಾಡುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ ರಾಮರಾಜ್ಯದ ಪ್ರತಿಜ್ಞೆಯೊಂದಿಗೆ ದೇವಸ್ಥಾನಗಳ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುವುದು ಹೇಳಿದ್ದಾರೆ.
ಇದನ್ನೂ ಓದಿ | Ayodhya Ram Mandir: ಜ.23ರಿಂದ ಸಾರ್ವಜನಿಕರಿಗೆ ತೆರೆಯಲಿರುವ ರಾಮ ಮಂದಿರ
ಲಕ್ಷಾಂತರ ಹಿಂದುಗಳ ಬಲಿದಾನದ ನಂತರ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದು ಒಂದು ಐತಿಹಾಸಿಕ ಕ್ಷಣವಾಗಿದ್ದು, ಈ ಶ್ರೀ ರಾಮಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಿದವರ ಮತ್ತು ತಮ್ಮ ಪ್ರಾಣದ ಬಲಿದಾನ ಮಾಡಿದ ರಾಮಭಕ್ತರನ್ನು ಸಮಿತಿಯು ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಹಿಂದು ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಬಾರಿ ಸ್ವಯಂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲು ಜನತೆಗೆ ಕರೆ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಸಮಿತಿಯ ಮೂಲಕ ಜ.15 ರಿಂದ 21ರವರೆಗೆ ಸ್ಥಳೀಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ದೇವಸ್ಥಾನಗಳ ಸ್ವಚ್ಛತೆಯ ನಂತರ ಎಲ್ಲ ಹಿಂದುಗಳನ್ನು ಒಂದು ಕಡೆ ಸೇರಿಸಿ ರಾಮರಾಜ್ಯ ಹಾಗೂ ಹಿಂದು ರಾಷ್ಟ್ರದ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುವುದು. ಇದರ ನಂತರ ಪ್ರಭು ಶ್ರೀರಾಮನ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆಗಳನ್ನು ವ್ಯಕ್ತಪಡಿಸಲಾಗುತ್ತದೆ ಎಂದು ಮೋಹನ್ ಗೌಡ ತಿಳಿಸಿದ್ದಾರೆ.
ಮನೆ-ಮನೆಯಲ್ಲಿ ದೀಪ ಹಾಗೂ ಕೇಸರಿ ಧ್ವಜ
ಇದನ್ನೂ ಓದಿ | Narendra Modi : ಸಂಪೂರ್ಣ ಸಂತರಾದ ಮೋದಿ; ಬರಿ ನೆಲದಲ್ಲಿ ನಿದ್ದೆ, ಹಣ್ಣುಗಳಷ್ಟೇ ಆಹಾರ
ಜ.22 ರಂದು ಸಮಿತಿಯ ಎಲ್ಲಾ ಕಾರ್ಯಕರ್ತರು, ಶ್ರೀರಾಮಭಕ್ತರು ಹಾಗೂ ಸಮಸ್ತ ಹಿಂದು ಬಾಂಧವರು ತಮ್ಮ ಮನೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಮೆಯ ಪೂಜೆ ಮಾಡುವುದು, ದೀಪಾವಳಿಯಂತೆ ಮನೆಯ ಬಾಗಿಲಿನಲ್ಲಿ ದೀಪ ಹಚ್ಚುವುದು, ಮನೆಯ ದ್ವಾರದಲ್ಲಿ ಸಾತ್ವಿಕ ರಂಗೋಲಿ ಬಿಡಿಸುವುದು ಮತ್ತು ಮನೆಯ ಮೇಲೆ ಕೇಸರಿ ಧ್ವಜ ಹಾರಿಸಬೇಕು. ಅದೇ ರೀತಿ ಹಿಂದು ಸಂಘಟನೆಗಳ ಮೂಲಕ ನಡೆಸಲಾಗುತ್ತಿರುವ ಕಲಶ ಯಾತ್ರೆ, ಅಕ್ಷತೆ ವಿತರಣಾ ಯಾತ್ರೆ, ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ವಿವಿಧ ಉಪಕ್ರಮಗಳಲ್ಲಿ ಸಹಭಾಗ ಮಾಡಲಾಗುವುದು ಎಂದು ಮೋಹನ್ ಗೌಡ ತಿಳಿಸಿದ್ದಾರೆ.