Site icon Vistara News

Hiremath Samsthan Bhalki | ಡಿ.22ರಂದು ಡಾ. ಚನ್ನಬಸವ ಪಟ್ಟದ್ದೇವರ 133ನೇ ಜಯಂತ್ಯುತ್ಸವ, ವಿದ್ಯಾಚೇತನ ಸಮಾವೇಶ

Hiremath Samsthan Bhalki

ಬೀದರ್: ಜಿಲ್ಲೆಯ ಭಾಲ್ಕಿಯ ಶ್ರೀ ಚನ್ನಬಸವಾಶ್ರಮದಲ್ಲಿ ಡಿ. 22ರಂದು ಭಾಲ್ಕಿಯ ಹಿರೇಮಠ ಸಂಸ್ಥಾನದ (Hiremath Samsthan Bhalki) ಕಾಯಕ ಪರಿಣಾಮಿ, ನೂತನ ಅನುಭವ ಮಂಟಪ ಶಿಲ್ಪಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 133ನೇ ಜಯಂತ್ಯುತ್ಸವ ಹಾಗೂ ವಿದ್ಯಾಚೇತನ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆಗೆ ಭಾಲ್ಕಿಯ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದವರೆಗೆ ಬಸವ ಪ್ರಭಾತಫೇರಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಲಿದೆ.

10 ಗಂಟೆಗೆ ಅಕ್ಕನ ಬಳಗದ ಶರಣೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ನಂತರ ಲೇಖಕರಾದ ಕರುಣಾ ಸಲಗರ ರಚನೆಯ ʼಗುಬ್ಬಚ್ಚಿ ಗೂಡುʼ ಕವನ ಸಂಕಲನ ಹಾಗೂ ಶಕುಂತಲಾ ರಾಜಕುಮಾರ ಬಚ್ಚಣ್ಣಾ ರಚನೆಯ ʼಗುರು ಸ್ಮರಣೆʼ 511 ಚನ್ನಬಸವ ನಾಮಾವಳಿ ಗ್ರಂಥ ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ಸಂತಪೂರದ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಮತ್ತು ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ವತಿಯಿಂದ 2023ರ ಕ್ಯಾಲೆಂಡರ್‌ ಲೋಕಾರ್ಪಣೆ ಮಾಡಲಾಗುತ್ತದೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಕುರುಬ ವರ್ಸಸ್‌ ಲಿಂಗಾಯತ ಕದನದಲ್ಲಿ ಗೆದ್ದು ಬಂದ ಬಸವರಾಜ ಹೊರಟ್ಟಿ: ಸಭಾಪತಿಯಾಗಿ ಆಯ್ಕೆ

ಉದ್ಘಾಟನಾ ಸಮಾರಂಭ
ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ, ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿ ನೇತೃತ್ವ ವಹಿಸಲಿದ್ದಾರೆ. ಸಮಾರಂಭವನ್ನು ಬೆಂಗಳೂರಿನ ಹೆಚ್ಚುವರಿ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ (ಐಪಿಎಸ್) ಉದ್ಘಾಟಿಸಲಿದ್ದಾರೆ. ವಿಸ್ತಾರ ಮೀಡಿಯಾ ಪ್ರೈ. ಲಿ. ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ‌ ಅನುಭಾವದ ನುಡಿಗಳನ್ನಾಡಲಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವೈಜಿನಾಥ ಹಲಸೆ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಔರಾದ್‌ನ ಹಿರಿಯ ಸಮಾಜ ಸೇವಕ ಶರಣ ಗಣಪತರಾವ ಖೂಬಾ ಅವರಿಗೆ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ- 2022 ಅನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಇದೇ ವೇಳೆ ಬೆಂಗಳೂರಿನ ರಮಣಶ್ರೀ ಸಮೂಹ ಸಂಸ್ಥೆ ಮುಖ್ಯಸ್ಥ, 2022ನೇ ಸಾಲಿನ ನಾಡೋಜ ಗೌರವ ಪದವಿ ಪ್ರಶಸ್ತಿ ಪುರಸ್ಕೃತ ಎಸ್‌. ಷಡಕ್ಷರಿ, ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ನಾಗಣಗೌಡ ಹಾಗೂ ಬೀದರ್‌ನ ಗುರುನಾನಕ್ ಪ್ರಬಂಧಕ ಕಮಿಟಿ ಅಧ್ಯಕ್ಷ, 2022ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಲಬೀರಸಿಂಗ್ ಅವರನ್ನು ಸನ್ಮಾನಿಸಲಾಗುತ್ತದೆ.

ಸಮಾರೋಪ ಸಮಾರಂಭ
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯುತ್ತದೆ. ಬಾಗಲಕೋಟೆಯ ಯಲ್ಲನಗೌಡ, ಲೋಕಾನಾಥ ಚಾಂಗ್ಲೇರ ಅವರ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಕಲಾವಿದರಿಂದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ರಚನೆ, ಜಗದೀಶ್‌ ಆರ್‌ ಜಾಣಿ ವಿನ್ಯಾಸ, ಸಂಗೀತ ನಿರ್ದೇಶನದ ʼಅಕ್ಕನಾಗಮ್ಮʼ ನಾಟಕ ಪ್ರದರ್ಶನ ಇರಲಿದೆ.

ಇದನ್ನೂ ಓದಿ | Panchamasali Reservation | ನಾಳೆ ಪಂಚಮಸಾಲಿ ಮೀಸಲು ಘೋಷಿಸಿದರೆ ಸಿಎಂಗೆ ಸನ್ಮಾನ, ಇಲ್ಲದಿದ್ದರೆ ಅಪಮಾನ: ಶ್ರೀ ಎಚ್ಚರಿಕೆ

Exit mobile version