ಹಿರಿಯೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಗರಸಭೆಯ (city council) ಮಾಜಿ ಅಧ್ಯಕ್ಷ ಹಾಗೂ ಭೋವಿ ಸಮಾಜದ ನಾಯಕ ಟಿ. ಚಂದ್ರಶೇಖರ್ ಬಿಜೆಪಿಗೆ ಸದ್ದಿಲ್ಲದೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಟಿ. ಚಂದ್ರಶೇಖರ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ತಿಮ್ಮಭೋವಿ, ರಂಗಸ್ವಾಮಿ ಸೇರಿದಂತೆ ಮತ್ತಿತರರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಟಿ. ಚಂದ್ರಶೇಖರ್ ಅವರು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ನಂತರ ನಗರಸಭಾ ಅಧ್ಯಕ್ಷರಾಗಿದ್ದರು. ಬಳಿಕ ನಡೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಶಾಸಕಿ ಕೆ. ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರ ಜತೆಗಿದ್ದ ಚಂದ್ರಶೇಖರ್ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಗುರುವಾರ (ಮಾ.30) ರಾತ್ರಿ ಮಾಜಿ ಸಚಿವ ಡಿ. ಸುಧಾಕರ್ ಅವರು ತಮ್ಮ ಮನೆಯಲ್ಲಿಯೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಅವರು ಬಿಜೆಪಿ ತೊರೆದಿರುವುದರಿಂದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ವಿಶ್ಲೇಷಣೆ ಸಹ ಈ ವೇಳೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭೋವಿ ಸಮಾಜದ ಮತಗಳು ಹೆಚ್ಚು ಬಂದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ಮಾಜಿ ಸಚಿವ ಡಿ. ಸುಧಾಕರ್, ಚಂದ್ರಶೇಖರ್ ಅವರು ಕಾಂಗ್ರೆಸ್‌ನ ತತ್ತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜನ ವಿರೋಧಿ ಆಡಳಿತ ಕೊನೆಗೊಂಡಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.