ನವದೆಹಲಿ: ಕರ್ನಾಟಕದಲ್ಲಿ ಸ್ವಾತಂತ್ರ್ಯ ದಿನದಂದೇ ವೀರ ಸಾವರ್ಕರ್ (Veer Savarkar) ಅವರ ಫ್ಲೆಕ್ಸ್ ಅಳವಡಿಕೆ ಕುರಿತು ಉಂಟಾದ ಗಲಾಟೆಯು ಹಿಂಸಾಚಾರಕ್ಕೆ ತಿರುಗಿದೆ. ಶಿವಮೊಗ್ಗದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಆಗುವಷ್ಟರಮಟ್ಟಿಗೆ ಗಲಾಟೆ ಜೋರಾಗಿದೆ. ಇದೇ ನೆಪದಲ್ಲಿ ರಾಜಕೀಯ ನಾಯಕರು ವೀರ ಸಾವರ್ಕರ್ ಬಗ್ಗೆ ಪರಸ್ಪರ ವಾದ, ಟೀಕೆಗಳಲ್ಲಿ ತೊಡಗಿದ್ದಾರೆ. ಇಂತಹ ರಾಜಕೀಯ ಮೇಲಾಟದ ಕುರಿತು ಖ್ಯಾತ ಇತಿಹಾಸ ತಜ್ಞ, ಕರ್ನಾಟಕದವರೇ ಆದ ವಿಕ್ರಮ್ ಸಂಪತ್ (Vikram Sampath) ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.
“ಸ್ವಾತಂತ್ರ್ಯ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ವೀರ ಸಾವರ್ಕರ್ ಅವರ ಬಗ್ಗೆ ರಾಜಕೀಯ ಮೇಲಾಟ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಅಂತಹ ವ್ಯಕ್ತಿಯ ಬಗ್ಗೆ ಗಲ್ಲಿ ರಾಜಕೀಯ ಸರಿಯಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
“ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಆದರೆ, ಇಂದಿರಾ ಗಾಂಧಿ ಅವರು ಮುಂಬೈನಲ್ಲಿ ಸಾವರ್ಕರ್ ಅವರ ಸ್ಮಾರಕ ನಿರ್ಮಾಣಕ್ಕೆ ವೈಯಕ್ತಿಕವಾಗಿ ನೆರವು ನೀಡಿದ್ದರು. ಅವರ ಸರಕಾರದಲ್ಲಿಯೇ ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಿಸಲಾಗಿತ್ತು. ಈಗ ಸಾವರ್ಕರ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ಕುಟುಕಿದ್ದಾರೆ.
ಕರ್ನಾಟಕದಲ್ಲಿ ಸಾವರ್ಕರ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ, ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದರು. “ಆಧುನಿಕ ಸಾವರ್ಕರ್‌ಗಳು ಹಾಗೂ ಜಿನ್ನಾಗಳು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ” ಎಂದಿದ್ದರು. ಈ ಹಿನ್ನೆಲೆಯಲ್ಲಿ ವಿಕ್ರಮ್ ಸಂಪತ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ | ಸಾವರ್ಕರ್ ಫ್ಲೆಕ್ಸ್ ಹರಿದವರನ್ನು ಕಂಡಲ್ಲಿ ಗುಂಡಿಕ್ಕಿ: ಸೊಗಡು ಶಿವಣ್ಣ ರೋಷಾವೇಶ