Site icon Vistara News

Holi 2023: ಕಾರವಾರದಲ್ಲಿ ಹೋಳಿ-ಸುಗ್ಗಿ ಕುಣಿತದ ಸಂಭ್ರಮ; ಎಲ್ಲೆಲ್ಲಿಯೂ ಕೋಲಾಟ, ಗುಮಟೆ ಪಾಂಗಿನ ಸದ್ದು

holly suggi kunitha karwar

#image_title

ಸಂದೀಪ ಸಾಗರ, ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ವಿಶೇಷ ಆಚರಣೆಗಳ ಪೈಕಿ ಹೋಳಿ ಸುಗ್ಗಿ ಕುಣಿತ (Holly Suuggi Kunitha) ಸಹ ಒಂದು.

ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸಡಗರದ ಸಂಭ್ರಮ ಕಾಣುತ್ತದೆ. ಈ ಬಾರಿ ಸಹ ವಿವಿಧ ಸಮುದಾಯಗಳ ಹೋಳಿ ಸುಗ್ಗಿ ಕುಣಿತ ಆರಂಭಗೊಂಡಿದೆ. ಭಿನ್ನ ವಿಭಿನ್ನವಾದ ತುರಾಯಿಗಳನ್ನು ಹೊತ್ತವರು ಸಮುದಾಯದ ಮನೆಗಳ ಬಳಿ ತೆರಳಿ ಕುಣಿಯುವ ಮೂಲಕ ತಮ್ಮ ಸಂಪ್ರದಾಯವನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಗ್ಗಿ ಪ್ರದರ್ಶನ ನೀಡಿದ ಬಳಿಕ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ತಿಲಕ ಇಟ್ಟು ಆಶೀರ್ವದಿಸಿದರು.

ಜಿಲ್ಲೆಯ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಗುನಗಿ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಾರಂಭಿಸುತ್ತಾರೆ. ಹಬ್ಬಕ್ಕೂ ಏಳೆಂಟು ದಿನಗಳ ಮುನ್ನ ಸುಗ್ಗಿ ಕುಣಿತ ಪ್ರಾರಂಭಿಸಿ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಈ ಬಾರಿ ಸಹ ಕಾರವಾರ ತಾಲೂಕಿನ ಗುನಗಿ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ಸಿಕ್ಕಿದ್ದು ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಿದ್ದಾರೆ.

ತಾಲೂಕಿನ ಚೆಂಡಿಯಾ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸುವುದು ಗುನಗಿ ಸಮಾಜದವರಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ತಮ್ಮ ಜನಾಂಗದವರು ನೆಲೆಸಿರುವ ಮನೆಗಳ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡುವುದರಿಂದ ಜನರಿಗೆ ಎದುರಾಗಿರುವ ತೊಂದರೆಗಳು ಬಗೆಹರಿಯುವುದರ ಜತೆಗೆ ಯಾವುದೇ ಕಾಯಿಲೆಗಳೂ ಮನೆಯವರಿಗೆ ಬರದಂತೆ ತಡೆಯುತ್ತದೆ ಅನ್ನೋದು ಹಾಲಕ್ಕಿ ಸಮುದಾಯದವರ ನಂಬಿಕೆಯಾಗಿದೆ.

ಇದನ್ನೂ ಓದಿ: Allu Arjun: ಚಿರಕಾಲ ನೆನಪಿನಲ್ಲಿ ಉಳಿಯುವಂಥ ಚಿತ್ರ ನೀಡುತ್ತೇವೆ: ಹೊಸ ಸಿನಿಮಾ ಬಗ್ಗೆ ಅಲ್ಲು ಅರ್ಜುನ್‌ ಹೇಳಿದ್ದೇನು?

ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ, ಪೇಟವನ್ನು ಕಟ್ಟಿ, ಪೊಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಒಮ್ಮೆ ವೇಷ ತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ಏಳು ದಿನಗಳವರೆಗೂ ವಾಪಸ್ ಮನೆಗೆ ತೆರಳುವಂತಿಲ್ಲ. ಜತೆಗೆ ಸಮಾಜದವರ ಮನೆಗಳ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ, ತಿಂಡಿ ಸ್ವೀಕರಿಸುವ ಪ್ರತೀತಿ ಇದೆ.

ಇದನ್ನೂ ಓದಿ: ವಿಸ್ತಾರ Money Guide : Sovereign Gold Bond : ಸಾವರಿನ್‌ ಗೋಲ್ಡ್ ಬಾಂಡ್‌ ಮಾರಾಟ ಇಂದಿನಿಂದ ಶುರು

ಸುಗ್ಗಿ ಆಡುವ ತಂಡದವರು ಒಂದು ತಿಂಗಳ ಮೊದಲೇ ತಯಾರಿಯನ್ನು ಆರಂಭಿಸುತ್ತಾರೆ. ಸುಗ್ಗಿ ಆಡುವಾಗ ತಲೆಯ ಮೇಲೆ ಹೊರುವ ತುರಾಯಿಗಳು ಎಷ್ಟಿರಬೇಕು ಎಂದು ನಿಗದಿಪಡಿಸಿಕೊಂಡು ಬಳಿಕ ಅವುಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದಾದ ಬಳಿಕ ಹೋಳಿ ಆಚರಣೆಗೆ ಎಂಟು ದಿನಗಳಿಗೆ ಮುನ್ನ ಸುಗ್ಗಿ ತಂಡದೊಂದಿಗೆ ಹೊರಟು ಸಮುದಾಯದ ಮನೆಗಳವರು ತಮ್ಮನ್ನು ಆಹ್ವಾನಿಸಿದಲ್ಲಿಗೆ ತೆರಳಿ ಕುಣಿತವನ್ನು ಪ್ರದರ್ಶನ ಮಾಡಲಾಗುತ್ತದೆ. ಹೋಳಿಯ ದಿನದಂದು ಸುಗ್ಗಿ ಪ್ರಾರಂಭಿಸಿದಲ್ಲಿಗೇ ವಾಪಸಾಗಿ ಕರಿ ದೇವರಿಗೆ ಪೂಜೆ ಸಲ್ಲಿಸಿ, ತುರಾಯಿಗಳನ್ನು ದೇವರಿಗೆ ಅರ್ಪಿಸಿದ ಬಳಿಕವೇ ಸುಗ್ಗಿ ಕುಣಿತವನ್ನು ಕೊನೆಗೊಳಿಸಲಾಗುತ್ತದೆ.

ಇದನ್ನೂ ಓದಿ: WPL 2023: ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್​

ಒಟ್ಟಿನಲ್ಲಿ ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿರುವ ಈ ದಿನಗಳಲ್ಲಿ ತಲೆ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿ ಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಸುಗ್ಗಿಯಲ್ಲಿ ಮಕ್ಕಳು, ಯುವಕರು ಸಹ ಹಿರಿಯರೊಂದಿಗೆ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಮುಂದಿನ ಪೀಳಿಗೆಗೂ ಆಚರಣೆಗಳನ್ನು ತಿಳಿಸಿಕೊಡುವಲ್ಲಿ ಸುಗ್ಗಿ ಕುಣಿತ ಸಹಕಾರಿಯಾಗಿದೆ.

ಇದನ್ನೂ ಓದಿ: ಮಂಗಳೂರು ಸ್ಫೋಟಕ್ಕೆ ಸಾದಾ ಕುಕ್ಕರ್‌ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್‌ ಈಗ ಏನು ಹೇಳ್ತಾರೆ: ಸಿಎಂ ಬೊಮ್ಮಾಯಿ ಪ್ರಶ್ನೆ

Exit mobile version