ಗದಗ: ಹೋಳಿ ಹಬ್ಬವನ್ನು (Holi 2023) ದೇಶಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಆದರೆ ಈ ಏಳು ಗ್ರಾಮಗಳಲ್ಲಿ ಮಾತ್ರ ಹೋಳಿ ಹಬ್ಬ ನಿಷಿದ್ಧ. ಅದಕ್ಕೆ ಕಾರಣ ರುದ್ರದೇವ ನೆಲೆನಿಂತಿರುವುದು.
ಗದಗ ಜಿಲ್ಲೆಯ ಏಳು ಹಳ್ಳಿಗಳಲ್ಲಿ ಇಂಥದ್ದೊಂದು ವಿಶಿಷ್ಟ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೋಳಿ ಹಬ್ಬ ಅಂದಾಕ್ಷಣ ಯುವಕರೆಲ್ಲ ಹಲಗೆ ಬಾರಿಸುತ್ತಾ, ಬಾಯಿ ಬಡೆದುಕೊಂಡು, ಊರು ಸುತ್ತಾಡಿ ಕಾಮನ ಮೆರವಣಿಗೆ ಮಾಡಿ ದಹನ ಮಾಡುವ ಸಂಪ್ರದಾಯ ಇರುತ್ತದೆ. ಆದರೆ, ಇಲ್ಲಿ ಮಾತ್ರ ಆ ಸಂಭ್ರಮವೇ ಕಾಣುವುದಿಲ್ಲ.
ಉಳಿದ ಕಡೆಗಳಲ್ಲಿ ಮನೆಯಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಮಾಡಿ ಮನೆಮಂದಿಯಲ್ಲಾ ಊಟ ಮಾಡುತ್ತಾ ಹೋಳಿ ಹುಣ್ಣಿಮೆಯನ್ನು ಆಚರಣೆ ಮಾಡುತ್ತಿದ್ದರೆ, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದಕ್ಷಿಣ ಕಾಶಿ ಕಾಲಕಾಲೇಶ್ವರ ಗ್ರಾಮ ಸೇರಿದಂತೆ ರಾಜೂರು, ದಿಂಡೂರು, ಲಕ್ಕಲಕಟ್ಟಿ, ನಾಗೇಂದ್ರಗಡ, ಬೈರಾಪೂರು, ಜಿಗೇರಿ ಸೇರಿದಂತೆ ಏಳು ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆಯನ್ನು ಆಚರಣೆ ಮಾಡುವುದಿಲ್ಲ.
ಇದನ್ನೂ ಓದಿ: Team India Holi: ಹೋಳಿ ಆಚರಿಸಿದ ಟೀಮ್ ಇಂಡಿಯಾ
ಕಾರಣ ಕಾಲಕಾಲೇಶ್ವರ ಗ್ರಾಮವು ಈ ಹಿಂದೆ ರುದ್ರ ಭೂಮಿಯಾಗಿತ್ತೆಂದು ಐತಿಹ್ಯವಿದ್ದು, ರುದ್ರದೇವನು ಇಲ್ಲಿ ನೆಲಸಿರುವುದರಿಂದ ಇಲ್ಲಿನ ಗ್ರಾಮಗಳಲ್ಲಿ ಹೋಳಿ ಹಬ್ಬ ನಿಷೇಧಿಸಲಾಗಿದೆ. ಒಂದು ವೇಳೆ ಈ ನಿಯಮ ಮೀರಿ ಹೋಳಿ ಆಚರಣೆ ಮಾಡಿದಲ್ಲಿ ಇಡಿ ಊರಿಗೆ ಕೆಡಕಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಏಳು ಗ್ರಾಮಗಳಲ್ಲಿ ಹೋಳಿ ಆಚರಣೆ ಮಾಡಿದರೆ ರುದ್ರ ದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯದಿಂಧ ಹೋಳಿ ಆಚರಣೆಯನ್ನು ಇಲ್ಲಿ ನಿಷೇಧಿಸಲಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ