Site icon Vistara News

Honeybee Attack: ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ

honeybee attack in tumkur

ತುಮಕೂರು: ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನುಹುಳುಗಳು (Honeybee Attack) ದಾಳಿ ಮಾಡಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ.

ಶಾಲೆಯ ಪಕ್ಕದಲ್ಲಿರುವ ತೋಟದಲ್ಲಿ ಜೇನು ಗೂಡು ಕಟ್ಟಿತ್ತು. ಶುಕ್ರವಾರ ಬೆಳಗ್ಗೆ ಶಾಲೆ ಆರಂಭಕ್ಕೂ ಮೊದಲು ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ 20ಕ್ಕೂ ಹೆಚ್ಚು ಮಕ್ಕಳ ಮೇಲೆ ಏಕಾಏಕಿ ಜೇನು ದಾಳಿ ನಡೆಸಿದೆ.

16 ವಿದ್ಯಾರ್ಥಿಗಳಿಗೆ ಬೆನ್ನು, ಕುತ್ತಿಗೆ, ಮುಖ, ತಲೆಗೆ ಗಾಯವಾಗಿದ್ದು, ಶಿರಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿರಾ ತಹಸೀಲ್ದಾರ್ ದತ್ತಾತ್ರೇಯ ಹಾಗೂ ಡಿವೈಎಸ್ಪಿ ಶೇಖರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಗೂ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಶಾಲೆ ಸುತ್ತಮುತ್ತ ಜೇನುಗೂಡು ಇದ್ದರೆ ತೆರವು ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಜೇನು ದಾಳಿಗೆ ಕಾರಣವೇನು ಎಂಬುದು ತಿಳಿದಿಲ್ಲ. ಜೇನು ಗೂಡಿಗೆ ಯಾರಾದರೂ ಕಲ್ಲು ಎಸೆದಿದ್ದರಾ ಎಂಬುದನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಅದೃಷ್ಟವಶಾತ್‌ ಯಾವುದೇ ಮಕ್ಕಳಿಗೆ ಪ್ರಾಣಹಾನಿಯಾಗಿಲ್ಲ.

ತುಮಕೂರಲ್ಲಿ ಈ ಹಿಂದೆಯೂ ಜೇನು ದಾಳಿ

ಹೆಜ್ಜೇನು ದಾಳಿಯಿಂದ ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿತ್ತು. ನಾಮಕರಣ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಜನರ ಮೇಲೆ ಏಕಾಏಕಿ ಹೆಜ್ಜೇನು ದಾಳಿ (Honeybee Attack) ಮಾಡಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

ವೀರಭದ್ರಯ್ಯ (47) ಮೃತರು. ಕಡಬ ಹೋಬಳಿ ಬೆಲವತ್ತ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಾಮಕರಣ ನಡೆಯುತ್ತಿದ್ದಾಗ ದಿಢೀರನೆ ಹೆಜ್ಜೇನು ನೋಣಗಳು ದಾಳಿ ನಡೆಸಿದ್ದವು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವೀರಭದ್ರಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಗಾಯಾಳುಗಳಿಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಜಾತ್ರೆಯಲ್ಲಿ ಹೆಜ್ಜೇನು ದಾಳಿ; 35 ಜನರಿಗೆ ಗಾಯ, 17 ಮಂದಿ ಗಂಭೀರ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ತೊಟ್ಟಿಲುಮಡು ಜಾತ್ರೆಯಲ್ಲಿ ಹೆಜ್ಜೇನು ದಾಳಿಯಿಂದ (Honeybee Attack) 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, 17 ಮಂದಿ ಸ್ಥಿತಿ ಗಂಭೀರವಾಗಿತ್ತು.

ಪ್ರತಿ ವರ್ಷ ಮೇಲುಕೋಟೆಯಲ್ಲಿ ತೊಟ್ಟಿಲುಮಡು ಜಾತ್ರೆ ನಡೆಯುತ್ತದೆ. ಹೀಗಾಗಿ ಬುಧವಾರ ಅಷ್ಠ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದ್ದರಿಂದ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಪಾಂಡವಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ 17 ಜನರನ್ನು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version