ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆ ಸೆರೆಗಾಗಿ 22ನೇ ದಿನವಾದ ಶುಕ್ರವಾರವೂ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಸಹಿತ ಎಲ್ಲರೂ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಇದೇ ವೇಳೆ ಇಷ್ಟು ದಿನದ ಕಾರ್ಯಾಚರಣೆಗೆ ಪ್ರತಿ ದಿನಕ್ಕೆ ೨.೫೦ ಲಕ್ಷ ರೂಪಾಯಿಯನ್ನು ವ್ಯಯಿಸಲಾಗಿದೆ. ಒಟ್ಟಾರೆಯಾಗಿ ೩೦ ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ ಎಂದು ಹೇಳಲಾಗಿದೆ.
ಗಾಲ್ಫ್ ಮೈದಾನದ ಗೇಟ್ ನಂಬರ್ 4ರಲ್ಲಿ ಶುಕ್ರವಾರವೂ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದರಿಂದ ಅಲ್ಲಿನ ಸುತ್ತಮುತ್ತಲ ಸಹಿತ ಅಂದಾಜು ಮಾರ್ಗಗಳಲ್ಲಿ ಹುಡುಕಾಟವನ್ನು ನಡೆಸಲಾಗಿದೆ. ಈ ನಡುವೆ ಗಜಪಡೆ ಕಾರ್ಯಾಚರಣೆಯೂ ಮುಂದುವರಿದಿತ್ತು.
೩೦ ಲಕ್ಷ ರೂಪಾಯಿ ಖರ್ಚು
ಪ್ರಾರಂಭದಿಂದ ಇಲ್ಲಿಯವರೆಗೂ ಚಿರತೆ ಸೆರೆಗಾಗಿ ಇದುವರೆಗೆ ೩೦ ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ. ಅರಣ್ಯ ಇಲಾಖೆ ನಿತ್ಯ ಅಂದಾಜು 2.50 ಲಕ್ಷ ರೂಪಾಯಿಯನ್ನು ವ್ಯಯಿಸುತ್ತಿದೆ ಎಂದು ಹೇಳಲಾಗಿದೆ. ಅಂದರೆ, ಮೊದಲೆರಡು ವಾರ ಸ್ಥಳೀಯ ಮಟ್ಟದಲ್ಲಿ ಶೋಧ ಕಾರ್ಯ ನಡೆದರೂ ಬಳಿಕ ಅಂತರ್ ಜಿಲ್ಲೆಗಳಿಂದಲೂ ಕಾರ್ಯಾಚರಣೆಗಾಗಿ ಆನೆಗಳನ್ನು, ಡ್ರೋಣ್ ಸೇರಿದಂತೆ ತಜ್ಞರ ತಂಡವನ್ನೂ ಕರೆಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವೆಚ್ಚವು ಹೆಚ್ಚುತ್ತಾ ಸಾಗಿದೆ ಎಂದು ಹೇಳಲಾಗಿದೆ.
ಮೂರನೇ ದಿನದ ಆಪರೇಷನ್ ಗಜಪಡೆ ಮುಕ್ತಾಯ
ಮೂರನೇ ದಿನ ಆಪರೇಷನ್ ಗಜಪಡೆ ಸಹ ಮುಕ್ತಾಯವಾಗಿದ್ದು, ಚಿರತೆ ಪತ್ತೆಯಾಗದೇ ಬರಿಗೈಯಲ್ಲಿ ಅರಣ್ಯ ಸಿಬ್ಬಂದಿ ವಾಪಸ್ ಆಗುವಂತಾಗಿದೆ. ಶುಕ್ರವಾರವೂ 8 ಮೈಲಿವರೆಗೆ ಗಜಪಡೆ ಶೋಧ ನಡೆಸಿವೆ. ಆದರೆ, ಚಿರತೆ ಇದುವರೆಗೂ ಪತ್ತೆಯಾಗಿಲ್ಲ. ಇನ್ನು ಶನಿವಾರವೂ ಗಾಲ್ಫ್ ಮೈದಾನದ 1 ಕಿಮೀ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಬಗ್ಗೆ ನೆಟ್ಟಿಗರ ವ್ಯಂಗ್ಯ
ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಕಂಡರೂ ಕೈಗೆ ಸಿಗದ ಚಿರತೆ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪೋಸ್ಟ್ ಹಾಕುತ್ತಿದ್ದಾರೆ. ಚಿರತೆ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿವೆ.
“ನಾ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ ಯಾರಪ್ಪಂದ ಏನೈತಿ, ಬೆಳಗಾವಿ ನಂದೈತಿ, ಈ ಬಾರಿ ಬೆಳಗಾವಿ ಗಣೇಶೋತ್ಸವ ಮುಗಿಸಿಯೇ ನಾನು ಹೋಗೋದು. ಬೆಳಗಾವಿಯ ಗಾಳಿ, ನೀರು ಚೆನ್ನಾಗಿದೆ ಕುಟುಂಬ ಸಮೇತ ಇಲ್ಲೇ ಶಿಫ್ಟ್ ಆಗ್ತೇನೆ’. ಏನ್ ಮಾಡ್ಕೋತಿ ಮಾಡ್ಕೋ, ರಾಜ್ಯೋತ್ಸವಕ್ಕ ಚನ್ನಮ್ಮ ಸರ್ಕಲ್‌ದಾಗ ಒಂದ್ ರೌಂಡ್ ಡ್ಯಾನ್ಸ್ ಮಾಡಿ ಹೋಗಾಂವ”. ಈ ರೀತಿ ವಿವಿಧ ಬರಹ ಬರೆದು ಚಿರತೆ ಫೋಟೋ ಹಾಕಿ ಪೋಸ್ಟ್ ಮಾಡಲಾಗುತ್ತಿದೆ. ಸಾಲದೆಂಬಂತೆ ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾದರಿ ಸಹ ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗಿದೆ. ರೇಸ್‌ಕೋರ್ಸ್ ವಿಳಾಸ ಹಾಕಿ ಆಧಾರ್ ಕಾರ್ಡ್ ಮಾದರಿಯನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದಲ್ಲದೆ, ಬಿಬತ್ಯಾ ಬೆಳಗಾಂವ್ಕರ್ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ | Vijayapura News | ವಿಜಯಪುರ ಡಾಬಾ ಕುರ್ಚಿ ಗಲಾಟೆ; ಚೂರಿ ಇರಿದಿದ್ದ ನಾಲ್ವರ ಅರೆಸ್ಟ್