ದಾವಣಗೆರೆ: ಇಲ್ಲಿನ ಹೊನ್ನಾಳಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊನ್ನಾಳಿ ಡಾನ್ ಎಂದೇ ಹೆಸರು ಗಳಿಸಿದ್ದ ಹೋರಿಯೊಂದು ಮೃತಪಟ್ಟಿದೆ. ಪಟ್ಟಣದ ನಿವಾಸಿ ಮಹೇಶ್ ಮತ್ತು ಚಂದ್ರು ಸಹೋದರಿಗೆ ಸೇರಿದ್ದ ಹೋರಿ ಕಳೆದೆರಡು ದಿನಗಳಿಂದ ನಿಶಕ್ತಿ ಹೊಂದಿದ್ದು, ಶುಕ್ರವಾರ ರಾತ್ರಿ ಮೃತಪಟ್ಟಿದೆ.
ದಾವಣಗೆರೆ, ಶಿವಮೊಗ್ಗ, ಹಾವೇರಿ ಸೇರಿದಂತೆ ಹತ್ತಾರು ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಹೊನ್ನಾಳಿ ಡಾನ್ ಫೀಲ್ಡಿಗಿಳಿದರೆ ಪ್ರಶಸ್ತಿ ಗೆಲ್ಲುವುದು ಪಕ್ಕಾ ಆಗಿತ್ತು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆಕ್ರಮಣಕಾರಿಯಾಗಿ ಮುನ್ನುಗುತಿತ್ತು. ಹೊನ್ನಾಳಿ ಡಾನ್ ಹೋರಿಯು ಸ್ಪರ್ಧೆಯಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಯನ್ನು ಗೆದ್ದಿತ್ತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೊನ್ನಾಳಿ ಡಾನ್ ಮೃತಪಟ್ಟಿದ್ದು, ಹೋರಿ ಮಾಲೀಕರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿಷಯ ತಿಳಿದ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ದುಃಖದಲ್ಲಿದ್ದ ಕುಟುಂಬದವರನ್ನು ಸಂತೈಸಿದರು. ಹೋರಿಯ ಅಂತಿಮ ದರ್ಶನ ಪಡೆದರು.
ಮನೆಯ ಸದಸ್ಯನಾಗಿದ್ದ ಹೋರಿಯನ್ನು ಕಳೆದುಕೊಂಡು ತಮಗೆ ಅತೀವ ನೋವಾಗಿದೆ. ಈ ಹೋರಿಯು ನಮಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿದ್ದಲ್ಲದೆ, ಈ ಭಾಗಕ್ಕೆ ಹೆಮ್ಮೆಯಾಗಿತ್ತು ಎಂದು ಮಾಲೀಕರು ಅಲವತ್ತುಕೊಂಡಿದ್ದಾರೆ.
ಹೋರಿಯ ಅಂತ್ಯ ಸಂಸ್ಕಾರವನ್ನು ಜಮೀನಿನಲ್ಲಿ ಮಾಡಲು ಹೋರಿ ಮಾಲೀಕರು ನಿರ್ಧರಿಸಿದ್ದಾರೆ. ಊರಿನ ಡಾನ್‌ನ ಅಂತಿಮ ದರ್ಶನವನ್ನು ಗ್ರಾಮಸ್ಥರು ಪಡೆದುಕೊಂಡರು.
ಇದನ್ನೂ ಓದಿ | ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೇ ನಡೆದ ಪವಾಡ! ನೆಲ ಅಗೆದಾಗ ಶಿವಲಿಂಗ ಪತ್ತೆ