ಹೊನ್ನಾವರ: “ಶರಾವತಿ ಆರತಿ ಸಮಿತಿ ಹೊನ್ನಾವರ ಇವರ ಆಶ್ರಯದಲ್ಲಿ ಮಾ. 31ರ ಸಂಜೆ 6 ಗಂಟೆಗೆ ಶರಾವತಿ ನದಿಯ (Sharavathi river) ದಡದಲ್ಲಿ ನಿಂತು ತಾಯಿ ಶರಾವತಿಗೆ ದೀಪವನ್ನು ಬೆಳಗುವ ಮೂಲಕ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಶರಾವತಿ ಆರತಿ ಸಮಿತಿಯ ತಾಲೂಕು ಗೌರವಾಧ್ಯಕ್ಷ ಜೆ. ಟಿ. ಪೈ ಹೇಳಿದರು.
ಪಟ್ಟಣದ ಮೂಡಗಣಪತಿ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತಿ, ಮತ, ಪಕ್ಷ ಭೇದ ಮರೆತು ಸಾಮರಸ್ಯದ ಮನೋಭಾವದಿಂದ ಶರಾವತಿ ನದಿಗೆ ಆರತಿ ಬೆಳಗಿಸಿ ನಮನ ಸಲ್ಲಿಸಲಾಗುವುದು. ತಾಲೂಕಿನ ಮೀನುಗಾರರು, ದೋಣಿ ಮಾಲೀಕರು, ಮರಳುಗಾರಿಕೆ ವೃತ್ತಿ ಮಾಡುವವರು, ಕೃಷಿಕರು ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಕೈ ಜೋಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ” ಎಂದರು.
ಸೇಫ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ. ಜಿ. ಶಂಕರ್ ಮಾತನಾಡಿ, “ಕೃಷಿ ಮೀನುಗಾರಿಕೆಗೆ, ಮರಳುಗಾರಿಕೆ ಸೇರಿ ವಿವಿಧ ಉದ್ಯೋಗದ ಮೂಲಕ ಶರಾವತಿ ನದಿಯ ಹಲವರಿಗೆ ಜೀವನಾಧಾರವಾಗಿದೆ. ಇವರೆಲ್ಲರೂ ನಮಿಸುವ ಮೂಲಕ ನದಿಗೆ ಗೌರವಿಸಬೇಕು. ದೇವಸ್ಥಾನದ ಧರ್ಮದರ್ಶಿಗಳು, ಆಡಳಿತ ಮಂಡಳಿಯವರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ಮಾತನಾಡಿ, “ಜೀವ ನದಿಯಾದ ಶರಾವತಿ ನದಿಯು ಕೃಷಿ ಮರಳುಗಾರಿಕೆ, ಪ್ರವಾಸೋದ್ಯಮದಿಂದ ಈ ಭಾಗದವರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ. ಈ ಜೀವ ನದಿಗೆ ಆರತಿ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಈ ವರ್ಷ ಏಕಕಾಲದಲ್ಲಿ ಐದು ಆರತಿ ಮಾಡುತ್ತಿದ್ದೇವೆ. ಐದು ಜನ ಪುರೋಹಿತರು ಕಾಶಿ ಮಾದರಿಯಲ್ಲಿ ಶ್ರದ್ಧಾಭಕ್ತಿಯಿಂದ ಶರಾವತಿ ನದಿಗೆ ಪೂಜೆ ಸಲ್ಲಿಸಲಿದ್ದಾರೆ” ಎಂದರು.
ಇದನ್ನೂ ಓದಿ: Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಈ ಸಂದರ್ಭದಲ್ಲಿ ಶರಾವತಿ ಆರತಿ ಸಮಿತಿಯ ಕಾರ್ಯದರ್ಶಿ ವಿಶ್ವನಾಥ್ ನಾಯಕ, ರಾಜು ಭಂಡಾರಿ, ಸುರೇಶ ಹೊನ್ನಾವರ, ವಿಜು ಕಾಮತ್, ಎಂ. ಎಸ್. ಹೆಗಡೆ ಕಣ್ಣಿ, ಲೋಕೇಶ್ ಮೇಸ್ತ, ಕುಮಾರ ಮಾರ್ಕಾಂಡೇಯಾ, ಪ್ರಶಾಂತ ನಾಯ್ಕ ಇತರರು ಉಪಸ್ಥಿತರಿದ್ದರು.