Site icon Vistara News

Hosadurga News: ವಿದ್ಯುತ್ ತಂತಿಗಳಿಂದ ಹೊತ್ತಿದ ಕಿಡಿಗೆ ಬೆಳೆ ಭಸ್ಮ; 80 ಸಾವಿರ ರೂ.ಗೂ ಅಧಿಕ ನಷ್ಟ

Fire to the farm hosdurga

#image_title

ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯ ನಾಗರಕಟ್ಟೆ ಗ್ರಾಮದಲ್ಲಿ (Nagarakatte Village) ಶನಿವಾರ (ಮಾ.25) ವಿದ್ಯುತ್ ತಂತಿಗಳಿಂದ ಹೊತ್ತಿಕೊಂಡ ಬೆಂಕಿಯ ಕಿಡಿ ರೈತ ಅಶೋಕ್‌ ಎಂಬುವವರ ಜಮೀನಿಗೆ ತಗುಲಿ 80 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.

ರೈತ ಅಶೋಕ್‌ ತಮ್ಮ 1 ಎಕರೆ 2 ಗುಂಟೆ ಜಮೀನಿನಲ್ಲಿ 800 ಅಡಕೆ ಗಿಡಗಳು ಬೆಳೆದಿದ್ದರು. ಈಗ ವಿದ್ಯುತ್ ತಂತಿಗಳಿಂದ ಹೊತ್ತಿಕೊಂಡ ಬೆಂಕಿಯಿಂದ 350 ರಿಂದ 400 ಅಡಕೆ ಗಿಡಗಳು ಭಸ್ಮವಾಗಿವೆ. 2 ರಿಂದ 3 ವರ್ಷವಿದ್ದ ಸಣ್ಣ ಅಡಕೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದರ ಜತೆಗೆ ಜಮೀನಿಗೆ ನೀರು ಹಾಯಿಸಲು ಬಳಸುತ್ತಿದ್ದ ಲಕ್ಷಾಂತರ ರೂಪಾಯಿ ಬೆಲೆಯ ಪೈಪ್‌ಗಳು, ವಿದ್ಯುತ್ ಬೋರ್ಡ್ ಹೀಗೆ ನೀರಾವರಿ ಕೃಷಿಗೆ ಬಳಸುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಹಾಳಾಗಿವೆ.

ಇದನ್ನೂ ಓದಿ: Karnataka Rain: ಮತ್ತೆ ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಮಳೆ ಮುನ್ಸೂಚನೆ; ಬೆಂಗಳೂರಲ್ಲಿ ಸಂಜೆಗೇ ಮಳೆ ಕಾಟ

ಜಮೀನಿನಲ್ಲಿ 11 ಕೆವಿ ದೊಡ್ಡ ವಿದ್ಯುತ್ ತಂತಿಗಳು ಹಾದು ಹೋಗಿವೆ. ಅದರ ಕೆಳಗೆ ತೇಗದ ಮರಗಳು ಬೆಳೆದಿದ್ದವು. ಅಧಿಕಾರಿಗಳು ಮತ್ತು ಲೈನ್‌ಮ್ಯಾನ್‌ಗಳು ಆಗಾಗ ಬಂದು ಮರಗಳ ಗೆಲ್ಲನ್ನು ಕಡಿದು ಹೋಗುತ್ತಿದ್ದರು. ಲೈನ್‌ಮ್ಯಾನ್ ಬದಲಾವಣೆ ಆಗಿದ್ದರಿಂದ ಇತ್ತೀಚೆಗೆ ಮರಗಳನ್ನು ಕಡಿಯದೆ ನಿರ್ಲಕ್ಷ್ಯ ವಹಿಸಿದ್ದರು. ನಾವು ತುಂಬಾ ಸಲ ಹೇಳಿದ್ದೆವು. ಆದರೆ ಬೇಸಿಗೆ ಕಾಲ ಇರುವುದರಿಂದ ಕೆಳಗೆ ಬಿದ್ದ ತರಗೆಲೆಗೆ ಬೆಂಕಿ ತಗುಲಿ ತೋಟ ಸುಟ್ಟು ಹೋಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ವಿದ್ಯುತ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಮೀನಿಗೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಕಚೇರಿಗೆ ಜಮೀನಿನ ರೆಕಾರ್ಡ್ ತರುವಂತೆ ಸೂಚಿಸಿದ್ದಾರೆ. ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ರೈತ ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: Neem Benefits: ಕಹಿಬೇವು ಕಹಿಯಲ್ಲ, ಸರಿಯಾಗಿ ಬಳಸಲು ತಿಳಿದರೆ ನಮ್ಮ ಬಾಳಿಗೆ ಸಿಹಿಯದು!

Exit mobile version