Site icon Vistara News

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

BSNL network problem in Hosanagara The lawyer decided to climb the tower and protest

ಹೊಸನಗರ: ತಾಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಟಕ್ಕೆ ಪರಿಹಾರವೆಂಬುದು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ, ಮೇ 27ರಂದು ಮತ್ತಿಮನೆ ಗ್ರಾಮದಲ್ಲಿನ (Hosanagara News) ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರ ತಾಲೂಕಿನ ಮತ್ತಿಮನೆ, ಸಂಪೆಕಟ್ಟೆ, ನಿಟ್ಟೂರು, ನಗರ, ಮಾಸ್ತಿಕಟ್ಟೆ, ಯಡೂರು ಭಾಗದಲ್ಲಿ ಸಾವಿರಾರು ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು 250 ರಿಂದ 499 ರೂ. ತನಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ ಆದರೆ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸರಿಯಾಗಿ ಇಲ್ಲದೆ ಗ್ರಾಹಕರು ವಂಚಿತರಾಗುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಸಾರ್ವಜನಿಕ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ಸರ್ಕಾರಿ ಕಚೇರಿಯಲ್ಲಿ ಸರ್ವರ್ ಇಲ್ಲದೆ ಪ್ರತಿನಿತ್ಯ ಸಾರ್ವಜನಿಕರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ನಡೆಸಲು ತೀರ್ಮಾನಿರುವುದಾಗಿ ಅವರು ತಿಳಿಸಿದರು.

ತಾಲೂಕಿನ ಕುಗ್ರಾಮಗಳಾದ ಮತ್ತಿಮನೆ, ಬಸವಾಪುರ, ಬೇಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ್, ಗುಬ್ಬಿಗ, ಗುಡೋಡಿ, ರಿಪ್ಪನ್ ಪೇಟೆ, ಹೆದ್ದಾರಿಪುರ, ಗರ್ತಿ ಕೆರೆ, ಹುಂಚಹೊಳಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ್, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದ ಕೊಪ್ಪ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿಸ್ಎಸ್‌ಎನ್‌ಎಲ್ ನೆಟ್‌ವರ್ಕ್ ಅತ್ಯಂತ ಕಳಪೆಯಾಗಿದೆ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ಈ ಭಾಗದ ಗ್ರಾಹಕರನ್ನು ಹಲವು ದಶಕಗಳಿಂದ ಬಿಎಸ್‌ಎನ್‌ಎಲ್‌ ವಂಚಿಸುತ್ತಾ ಬಂದಿದೆ. ತಾಲೂಕಿನ ಶೇ.60 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮರ್ಪಕವಾಗಿಲ್ಲ ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವಕೀಲ ಮೋಹನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Exit mobile version