Site icon Vistara News

Hosanagara News: ಶಾಲೆಗಳು ಸರಸ್ವತಿ ನೆಲೆಸಿದ ಪುಣ್ಯಸ್ಥಳ: ನ್ಯಾಯಾಧೀಶ ರವಿಕುಮಾರ್

Hosanagara School Commencement Program

ಹೊಸನಗರ: ವಿದ್ಯೆಯಿಂದ (Education) ಮಾತ್ರ ಸಂಸ್ಕಾರ ಬೆಳೆಯಲು ಸಾಧ್ಯ, ವಿದ್ಯೆ ಜತೆ ವಿನಯವನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ (High position) ಏರಬಹುದಾಗಿದೆ ಎಂದು ಹೊಸನಗರ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ರವಿಕುಮಾರ್ ಹೇಳಿದರು.

ತಾಲೂಕಿನ ಸಂಪೆಕಟ್ಟೆ ಗ್ರಾಪಂ ವ್ಯಾಪ್ತಿಯ ಮತ್ತಿಕೈ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ವರ್ಷಕ್ಕೆ ವಿದ್ಯುಕ್ತ ಚಾಲನೆ ನೀಡಿ, ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿದರು.

ಇದನ್ನೂ ಓದಿ: Text Books: ರೋಹಿತ್‌ ಚಕ್ರತೀರ್ಥ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ: ಅವರು ಮಾಡಿದ್ದನ್ನು ಕಿತ್ತು ಎಸೆಯಿರಿ ಎಂದ ದೇವನೂರು ಮಹಾದೇವ

ಶಾಲೆಗಳು ಸರಸ್ವತಿ ನೆಲೆಸಿದ ಪುಣ್ಯ ಸ್ಥಳ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, 1823ರಲ್ಲಿ ಆರಂಭವಾದ ಕೊಡಚಾದ್ರಿ ತಪ್ಪಲಿನ ಮತ್ತಿಕೈ ಶಾಲೆ 100 ವರ್ಷ ತುಂಬಿ ಶತಮಾನೋತ್ಸವ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಶಾಲೆಯಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಪಡೆದಿರುವುದು ಮಾದರಿಯಾಗಿದೆ. ಈ ಮಕ್ಕಳನ್ನು ನೋಡುತ್ತಿದ್ದರೆ ನಮ್ಮ ಬಾಲ್ಯ ನೆನಪಿಗೆ ಬರುತ್ತಿದೆ. ಶಾಲಾ ದಿನಗಳಲ್ಲಿ ಉತ್ತಮ ಶಿಕ್ಷಣ ಹೊಂದಿ ಯೋಗ್ಯ ಪ್ರಜೆಯಾಗಬೇಕು ಎಂದರು.

ವಿಶ್ವ ತಂಬಾಕು ರಹಿತ ದಿನವಾದ ಇಂದು ಬಹಳ ಮುಖ್ಯವಾಗಿ ತಂಬಾಕು ಉತ್ಪನ್ನಗಳ ಕಡೆ ಆಕರ್ಷಿತವಾಗುತ್ತಿರುವ ವಿದ್ಯಾರ್ಥಿಗಳು, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮವನ್ನು ಅರಿತು ಅವುಗಳಿಂದ ದೂರ ಇರಬೇಕು. ಶಾಲೆಯ 100 ಮೀಟರ್‌ ವ್ಯಾಪ್ತಿಯಲ್ಲಿ ಯಾರಾದರೂ ತಂಬಾಕು ಉತ್ಪನ್ನವನ್ನು ಮಾರಾಟ ಮಾಡಲು ಯತ್ನಿಸಿದರೆ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ನೂತನ ಮುಖ ಮಂಟಪದ ಉದ್ಘಾಟನೆಯನ್ನು ಹೊಸನಗರ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ರವಿಕುಮಾರ್ ನೆರವೇರಿಸಿದರು.

ಇದನ್ನೂ ಓದಿ: Wrestlers Protest: ದೇಶಕ್ಕಾಗಿ ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲಿರುವ ಕುಸ್ತಿಪಟುಗಳು

ಹೊಸನಗರ ನ್ಯಾಯಾಲಯದ ಕಿರಿಯ ನ್ಯಾಯಾಧೀಶೆ ನಜಿರಾ ಭಾನು ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ್ ಹಾಗೂ ನಗರ ಸಬ್‌ಇನ್ಸ್‌ಪೆಕ್ಟರ್ ರಮೇಶ್ ಕುಮಾರ್, ಸಂಪೆಕಟ್ಟೆ ಗ್ರಾಪಂ ಅಧ್ಯಕ್ಷೆ ಅನುಪಮಾ ಮತ್ತು ಸದಸ್ಯರು ಹಾಗೂ ಮುಖಂಡರಾದ ಕುಮಾರ್ ಭಟ್, ಲಕ್ಷ್ಮೀನರಸಿಂಹ ಭಟ್, ಸುಬ್ರಮಣ್ಯ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version