ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನೇರ ಅಡಿಕೆ ಖರೀದಿಯಿಂದ ಸಣ್ಣ ವ್ಯಾಪಾರಿಗಳಿಗೆ ಹಾಗೂ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಮಲೆನಾಡು ಅಡಿಕೆ ಮಾರಾಟಗಾರರ ಸಂಘದ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.
ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘದ ವತಿಯಿಂದ ಹೊಸನಗರ ಪಟ್ಟಣದ ಚೌಡಮ್ಮ ರಸ್ತೆಯಲ್ಲಿರುವ ಮ್ಯಾಮ್‌ಕೋಸ್ ಸಂಸ್ಥೆಯ ಆವರಣದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮ್ಯಾಮ್‌ಕೋಸ್ ಸಂಸ್ಥೆಯು ಹೊಸನಗರ ತಾಲೂಕು ವ್ಯಾಪ್ತಿಯ ತನ್ನ ಅಡಿಕೆ ಬೆಳೆಗಾರ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಹಿಂದೆಯೇ ಹೊಸನಗರ ಎಪಿಎಂಸಿ ಆವರಣದಲ್ಲಿ ಶಾಖೆಯನ್ನು ತೆರೆದು ವ್ಯವಹರಿಸುತ್ತಿದ್ದು, ಇದೀಗ ಸದಸ್ಯರ ಬಹು ದಿನದ ಬೇಡಿಕೆಗೆ ಸ್ಪಂದಿಸಿ ಮ್ಯಾಮ್‌ಕೋಸ್ ಹಳೆಯ ಕಟ್ಟಡದಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಎಲ್ಲ ಅಡಿಕೆ ಬೆಳೆಗಾರರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ತುರ್ತು ಹಣಕಾಸು ತೊಂದರೆ ಇದ್ದವರು ನಮ್ಮ ಕೇಂದ್ರದಲ್ಲಿ ಅಡಿಕೆ ಹಾಕಿದ ತಕ್ಷಣ ಅಂದಿನ ಧಾರಣೆಯ ಬೆಲೆಯನ್ನು ಪಡೆಯಬಹುದು. ಸ್ಟಾಕ್ ಇಟ್ಟು ವ್ಯಾಪಾರ ಮಾಡುವವರಿಗೂ ಇಲ್ಲಿ ಅನುಕೂಲ ಕಲ್ಪಿಸಲಾಗಿದೆ. ಸರ್ಕಾರಿ ರಜೆ ಹೊರತುಪಡಿಸಿ ಉಳಿದೆಲ್ಲ ದಿನದಲ್ಲಿ ಖರೀದಿ ಕೇಂದ್ರವು ತೆರೆದಿರುತ್ತದೆ ಎಂದರು.
ಇದನ್ನೂ ಓದಿ | Gautam Adani : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ಕ್ಕೆ ಇಳಿದ ಗೌತಮ್ ಅದಾನಿ
ಸಮಾರಂಭದಲ್ಲಿ ಮಲೆನಾಡು ಅಡಿಕೆ ಮಾರಾಟಗಾರರ ಸಂಘದ ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಎಚ್.ಡಿ. ಸುಬ್ರಹ್ಮಣ್ಯ, ವಿರೂಪಾಕ್ಷಪ್ಪ, ಸಿ.ಬಿ ಈಶ್ವರಪ್ಪ, ಚಂದ್ರಶೇಖರ್, ಪಿ.ಎನ್. ಶಶಿಧರ್, ಎನ್.ಆರ್.ದೇವಾನಂದ್, ಮಲೆನಾಡು ಅಡಿಕೆ ಮಾರಾಟಗಾರರ ಸಂಘದ ವ್ಯವಸ್ಥಾಪಕರಾದ ಮುರುಗೇಶ್, ದೇವರಾಜ್, ನೇರ ಖರೀದಿ ಕೇಂದ್ರದ ವ್ಯವಸ್ಥಾಪಕ ವಿಠಲ ಶೆಟ್ಟಿ, ಜನರಲ್ ಮ್ಯಾನೇಜರ್ ಜಯಂತಿ, ಪುಷ್ಪಲತಾ, ಅಡಿಕೆ ವ್ಯಾಪಾರಿ ರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.