Site icon Vistara News

Hosanagara News: ಮಾ.4ಕ್ಕೆ ಪಟಗುಪ್ಪ ಸೇತುವೆ ಬಳಿ ಶರಾವತಿ ಹಿನ್ನೀರ ಹಬ್ಬ; ಮುಳುಗಡೆ ಸಂತ್ರಸ್ತ ಕುಟುಂಬಗಳ ಸಂಭ್ರಮ

Sharavathi Backwater Festival hosanagara MLA Hartalu Halappa

#image_title

ಹೊಸನಗರ: “ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ಕನಸಿನ ಸೇತುವೆಯಾದ ಪಟಗುಪ್ಪ ಸೇತುವೆಯ ಬಳಿ ಶರಾವತಿ ಹಿನ್ನೀರ ಹಬ್ಬವನ್ನು (Sharavathi Backwater Festival) ಮಾರ್ಚ್ 4ರಂದು ಆಚರಿಸಲಾಗುವುದು” ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್‌ ಹೇಳಿದರು.

ಹೊಸನಗರ ತಾಲೂಕು ಪಟಗುಪ್ಪ ಸೇತುವೆಯ ಬಳಿ ಭಾನುವಾರ (ಫೆ.೨೦) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶಾಸಕ ಹರತಾಳು ಹಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಹಿನ್ನೀರ ಹಬ್ಬವನ್ನು ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮವು ಹೊಸನಗರ ತಾಲೂಕು ಹಾಗೂ ಸಾಗರ ತಾಲೂಕಿಗೆ ಹೊಂದಿಕೊಂಡಿರುವುದರಿಂದ ರಾಜ್ಯದಲ್ಲಿ ಖ್ಯಾತಿ ಪಡೆದಿರುವ 10 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಸಿನಿಮಾ ನಟರು ಹಾಗೂ ಹೆಸರಾಂತ ಟಿ.ವಿ ಕಲಾವಿದರು ಭಾಗವಹಿಸಲಿದ್ದಾರೆ” ಎಂದು ವಿವರಿಸಿದರು.

ಇದನ್ನೂ ಓದಿ: Sindhuri Vs Roopa : Get well soon; ರೂಪಾಗೆ ರೋಹಿಣಿ ತಿರುಗೇಟು; ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಸಿಂಧೂರಿ ದಂಪತಿ

“ಈ ಕಾರ್ಯಕ್ರಮವು ಪಕ್ಷಾತೀತವಾಗಿ ಎರಡು ಗ್ರಾಮ ಪಂಚಾಯಿತಿಯವರ ಸಮ್ಮಿಲನದಲ್ಲಿ ನಡೆಯಲಿದ್ದು ಹತ್ತಾರು ಹಳ್ಳಿಯ ಜನರು ಈ ಕಾರ್ಯಕ್ರಮಕ್ಕೆ ಕೈಜೋಡಿಸಲಿದ್ದಾರೆ. ಈ ಕಾರ್ಯಕ್ರಮ ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು ಎರಡು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, 6 ಗಂಟೆಯಿಂದ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಸಭಾ ಕಾರ್ಯಕ್ರಮ ಮುಗಿದ ನಂತರ ಆರ್ಕೆಸ್ಟ್ರಾ ಕಾರ್ಯಕ್ರಮ ಇರುತ್ತದೆ . ನಂತರ ರಾಜ್ಯದಲ್ಲಿ ಹೆಸರು ಮಾಡಿರುವ ನಾಲ್ಕು ಕೋಲಾಟ ತಂಡದಿಂದ ಕೋಲಾಟ ಕಾರ್ಯಕ್ರಮ ಇರುತ್ತದೆ. ಆಯಾಯ ಕೆಲಸಗಳಿಗೆ ಕಮಿಟಿಯನ್ನು ರಚಿಸಲಾಗಿದ್ದು ಆಯಾ ಕಮಿಟಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು ಎಲ್ಲ ಕಮಿಟಿಯ ಅಧ್ಯಕ್ಷತೆಯನ್ನು ಶಾಸಕರೇ ವಹಿಸಲಿದ್ದಾರೆ. ಆಹಾರ ಮೇಳವನ್ನು ಆಯೋಜಿಸಲಾಗಿದ್ದು ಈ ಆಹಾರ ಮೇಳದಲ್ಲಿ ವಿವಿಧ ಬಗೆಯ ಮಲೆನಾಡಿನ ರುಚಿಯಾದ ಸಸ್ಯಹಾರಿ ಹಾಗೂ ಮಾಂಸಾಹಾರಿ ಪದಾರ್ಥಗಳು ಸಿಗಲಿವೆ” ಎಂದರು.

ಇದನ್ನೂ ಓದಿ: ಮಕ್ಕಳ ಕಥೆ: ಕುರಿ ಮತ್ತು ಮೇಕೆಯ ಜಗತ್‌ ಪರ್ಯಟನೆ

“ನಮ್ಮ ಮಲೆನಾಡು ಭಾಗದ ಜನರು ಶರಾವತಿಯ ತೀರದಲ್ಲಿದ್ದು ತಮ್ಮ ಜಾಗವನ್ನು ಕಳೆದುಕೊಂಡು ಮನೆಗಳನ್ನು ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಅವರನ್ನು ಒಟ್ಟು ಮಾಡಿ ಹಬ್ಬವನ್ನು ಆಚರಿಸುವ ಉದ್ದೇಶವೇ ಇದಾಗಿದೆ. ಹೀಗಾಗಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಈ ಪಟಗುಪ್ಪ ಸೇತುವೆ ಬಳಿ ನಡೆಯುವ ಶರಾವತಿ ಹಿನ್ನೀರ ಹಬ್ಬಕ್ಕೆ ಎಲ್ಲರೂ ಆಗಮಿಸಿ ಮಲೆನಾಡ ಸೊಬಗನ್ನು ಸವಿಯಬೇಕು” ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಮಂಡಾನೆ ಮೋಹನ್, ಎಂ.ಎನ್ ಸುಧಾಕರ್, ಚಾಲುಕ್ಯ ಬಸವರಾಜ್, ಮೆಣಸೆ ಆನಂದ್, ಎಂ ಗುಡ್ಡಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ, ಸದಸ್ಯ ಚಿಕ್ಕನಕೊಪ್ಪ ಶ್ರೀಧರ, ರಮೇಶ್, ರಾಜೇಂದ್ರ, ಗಿರೀಶ್, ಗುರುಮೂರ್ತಿ, ಇಂದ್ರೇಶ್, ಸಂತೋಷ, ಸುರೇಂದ್ರ, ಗಾಳಿ ಶಿವಪ್ಪ, ಪ್ರಹ್ಲಾದ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: KEA Recruitment : ಅಭ್ಯರ್ಥಿಗಳೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಫೋನ್‌ ಮಾಡಬೇಡಿ!

Exit mobile version