Site icon Vistara News

ಬಾಟಲಿ ಕಾರ್ಕ್​ ನುಂಗಿ ಅಪಾಯಕ್ಕೀಡಾಗಿದ್ದ 8 ತಿಂಗಳ ಮಗುವಿನ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರು

https://www.lokmattimes.com/health/8-month-old-baby-swallows-bottle-cork-bluru-doctors-successfully-operate/

ಬೆಂಗಳೂರು: ಬಾಟಲಿಯ ಕಾರ್ಕ್​ (ಬೆಣೆ ಅಥವಾ ಬಿರಡೆ)ನ್ನು ನುಂಗಿ, ಪ್ರಾಣಾಪಾಯಕ್ಕೀಡಾಗಿದ್ದ 8ತಿಂಗಳ ಮಗುವಿನ ಜೀವವನ್ನು ಉಳಿಸುವಲ್ಲಿ ಬೆಂಗಳೂರಿನ ನಾಗರಬಾವಿ ಫೋರ್ಟಿಸ್​ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಪುಟಾಣಿ ಮಗು ಆಟವಾಡುತ್ತಿತ್ತು, ಅದ ಮಧ್ಯೆ ಎರಡು ಸೆಂಟಿಮೀಟರ್​ ಉದ್ದದ ಬಾಟಲಿ ಕಾರ್ಕ್​​ನ್ನು ನುಂಗಿತ್ತು. ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ. ನರೇಂದ್ರನಾಥ್​, ಡಾ. ಎಚ್​.ಕೆ.ಸುಶೀನ್ ದತ್​ ಸೇರಿ ಲಾರಿಂಗೋಸ್ಕೋಪಿ ಮಾಡಿ, ಆ ಬಿರಡೆಯನ್ನು ತೆಗೆದಿದ್ದಾರೆ. ಸದ್ಯ ಮಗುವಿನ ಪ್ರಾಣ ಅಪಾಯದಿಂದ ಪಾರಾಗಿದೆ.

ಹೀಗೆ ಬಾಟಲಿಯ ಕಾರ್ಕ್​ ನುಂಗಿದ್ದ ಮಗುವಿಗೆ ತಕ್ಷಣಕ್ಕೆ ಏನೂ ಅಪಾಯ ಆಗಿರಲಿಲ್ಲ. ಆದರೆ ಮೂರ್ನಾಲ್ಕು ದಿನಗಳ ನಂತರ ಅದು ಉಸಿರಾಡಲು ಕಷ್ಟಪಡತೊಡಗಿತು. ಆಗ ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಒಟ್ಟು ಮೂರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು. ಮಗುವಿಗೆ ಶ್ವಾಸಕೋಶದ ಸಮಸ್ಯೆ ಇರಬಹುದು ಎಂದು ಅಂದಾಜಿಸಿದ ವೈದ್ಯರೊಬ್ಬರು ನೆಬ್ಯುಲೈಜರ್​ ಚಿಕಿತ್ಸೆ ಶಿಫಾರಸು ಮಾಡಿದರು. ಆದರೆ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ದಿನೇದಿನೆ ಮಗುವಿನ ಆರೋಗ್ಯ ಕ್ಷೀಣಿಸಿತು. ಅತಿಯಾಗಿ ಜ್ವರ ಕಾಡಲು ಪ್ರಾರಂಭವಾಯಿತು. ಗಂಟಲ ಬಳಿ ಅದಕ್ಕೆ ನೋವು ಉಂಟಾಗಿತ್ತು. ಅಷ್ಟೇ ಅಲ್ಲ, ಅದು ಬಲವಂತವಾಗಿ ಉಸಿರಾಡುತ್ತಿದ್ದಾಗ ಗಂಟಲಿನಿಂದ ಶಿಳ್ಳೆಯಂಥ ಧ್ವನಿ ಹೊರಡುತ್ತಿತ್ತು. ಆಹಾರವನ್ನು ತಿನ್ನುತ್ತಿರಲಿಲ್ಲ. ತೀರ ಮಂಕಾಗಿಬಿಟ್ಟಿತ್ತು.

ಅಂತಿಮವಾಗಿ ಪಾಲಕರು ಮಗುವನ್ನು ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿ ವೈದ್ಯರು ಮಗುವಿಗೆ ಎಲ್ಲ ರೀತಿಯ ತಪಾಸಣೆಗಳನ್ನೂ ಮಾಡಿ, ಗಂಟಲಲ್ಲಿ ಇರುವ ಕಾರ್ಕ್​​ನ್ನು ಹೊರತೆಗೆದಿದ್ದಾರೆ. ಆ ಮುಚ್ಚಳವನ್ನು ತೆಗೆಯುತ್ತಿದ್ದಂತೆ ಮಗು ನಿರಾಳವಾಗಿದೆ, ಮರುದಿನವೇ ಅದನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಾ. ನರೇಂದ್ರನಾಥ್, ‘ಮಗುವನ್ನು ಅಡ್ಮಿಟ್ ಮಾಡಿಕೊಂಡಾಗ ಅದರ ಗಂಟಲಿನಿಂದ ಒಂದು ಸ್ವರ ಹೊರಡುತ್ತಿರುವುದು ನಮ್ಮ ಅರಿವಿಗೆ ಬಂತು. ಗಂಟಲಲ್ಲಿಯೇ ಏನೋ ಸಮಸ್ಯೆ ಇದೆ ಎಂಬುದು ಗೊತ್ತಾಯಿತು. ಹಾಗಾಗಿ ಲಾರಿಂಗೋಸ್ಕೋಪಿ (ಎಂಡೋಸ್ಕಪಿ ಮಾದರಿ ಪರೀಕ್ಷೆ) ಮಾಡಿದೆವು. ಗಂಟಲಿನ ಕೆಳಭಾಗದಲ್ಲಿ ಕಾರ್ಕ್​ ಇರುವುದು ಪತ್ತೆಯಾಯಿತು. ಕೂಡಲೇ ಆಪರೇಶನ್​ ಮಾಡಿ, ಅದನ್ನು ಹೊರಗೆ ತೆಗೆಯಲಾಗಿದೆ. ಇನ್ನೂ ತುಂಬ ದಿನ ಕಾರ್ಕ್​ ಮಗುವಿನ ಗಂಟಲಲ್ಲೇ ಇದ್ದರೆ ಹೆಚ್ಚಿನ ಅಪಾಯ ಆಗುವ ಸಾಧ್ಯತೆ ಇತ್ತು. ಎದೆ ಭಾಗದಲ್ಲಿ ಸೋಂಕು ಉಂಟಾಗಿ, ಉಸಿರಾಟ ಕ್ಷೀಣವಾಗುತ್ತಿತ್ತು ಎಂದು ಹೇಳಿದ್ದಾರೆ.

‘ಮನೆಯಲ್ಲಿ ಇರುವ ಸಣ್ಣಮಕ್ಕಳನ್ನು ತುಂಬ ಸೂಕ್ಷ್ಮವಾಗಿ ನಿಭಾಯಿಸಬೇಕು. ಇಂಥ ಸಣ್ಣ ವಸ್ತುಗಳು ಸಿಗದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಏನೂ ಗೊತ್ತಾಗುವುದಿಲ್ಲ. ಎಲ್ಲವನ್ನೂ ಬಾಯಿಗೆ ಹಾಕುತ್ತವೆ. ಹಾಗಾಗಿ ಮಕ್ಕಳ ಆರೈಕೆ ಬಗ್ಗೆ ಜಾಸ್ತಿ ಗಮನಕೊಡಿ’ ಎಂದು ಡಾ. ಎಚ್​.ಕೆ.ಸುಶೀನ್​ ದತ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮನಕಲಕುವ ಸುದ್ದಿ ಇದು; ಬೋಟ್​ ಕಟ್ಟುತ್ತಿದ್ದ ಅಪ್ಪನ ಎದುರೇ 1 ವರ್ಷದ ಮಗುವನ್ನು ಎಳೆದೊಯ್ದು, ನುಂಗಿದ ಮೊಸಳೆ

Exit mobile version