ವಿಜಯನಗರ: ಮುಸ್ಲಿಂ ಸಮುದಾಯವನ್ನು (muslim community) ಕೇಂದ್ರೀಕರಿಸಿದ ಚಿತ್ರಕತೆ (Screen play) ಹೊಂದಿರುವ ʼಹಮ್ ದೋ, ಹಮಾರೇ ಬಾರಹ್ʼ (Hum Do Humare Barah) ಚಿತ್ರ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತವಾಗಿದೆ. ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ ಮತ್ತು ಮುಸ್ಲಿಂ ಸಮಾಜದಿಂದ ವಿರೋಧ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಇದರ ಬಿಡುಗಡೆ ತಡೆಯುವಂತೆ ವಿಜಯನಗರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಯಾವುದೀ ಸಿನಿಮಾ?
ʼಹಮ್ ದೋ, ಹಮಾರೇ ಬಾರಹ್ʼ (hum do humare barah) ಚಿತ್ರ ನಿಗದಿಯಂತೆ ಜೂನ್ 7ರಂದು ಬಿಡುಗಡೆಯಾಗಬೇಕಿದೆ. ಆದರೆ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಅಭಿನಯದ ಈ ಚಿತ್ರದ ಸುತ್ತ ಈಗಲೇ ವಿವಾದದ ಕಾರ್ಮೋಡ ಕವಿದಿದೆ. ಒಂದೆಡೆ, ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕೂಡ ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಎನ್‌ಸಿಪಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ನಟ ಅನ್ನು ಕಪೂರ್ ಮಹಾರಾಷ್ಟ್ರ ಪೊಲೀಸ್ ಮತ್ತು ಗೃಹ ಸಚಿವಾಲಯದಿಂದ ಭದ್ರತೆಯನ್ನು ಕೋರಿದ್ದಾರೆ.
ಕಮಲ್ ಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಅನ್ನು ಕಪೂರ್ ಹೊರತಾಗಿ ಪಾರ್ಥ್ ಸಮಾನ್, ಅಶ್ವಿನಿ ಕಲ್ಸೇಕರ್ ಮತ್ತು ಪರಿತೋಷ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರವು ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಪ್ರಶಂಸಿಸಲ್ಪಟ್ಟಿದೆ. ಈ ಚಿತ್ರದ ಟೀಸರ್ ನೋಡಿದ ಮೇಲೆ ನಮಗೆ, ನಮ್ಮ ಕಲಾವಿದರಿಗೆ ಹಾಗೂ ನಿರ್ದೇಶಕರಿಗೆ ಜೀವ ಬೆದರಿಕೆ ಬರುತ್ತಿದೆ ಎಂದು ಅನ್ನು ಕಪೂರ್ ಹೇಳಿದ್ದಾರೆ. “ಐಸಿಸ್ ಮಾದರಿಯಲ್ಲಿ ಶಿರಚ್ಛೇದ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಕಲಾವಿದರಿಗೆ ರಕ್ಷಣೆ ನೀಡುವಂತೆ ನಾನು ಮಹಾರಾಷ್ಟ್ರ ಪೊಲೀಸರು, ಗೃಹ ಸಚಿವರು ಮತ್ತು ಗೃಹ ಸಚಿವಾಲಯವನ್ನು ಕೋರುತ್ತೇನೆ” ಎಂದಿದ್ದಾರೆ.
“ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಫೋನ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ನನ್ನ ಚಿತ್ರತಂಡಕ್ಕೆ ಹೇಳುತ್ತೇನೆ. ಸಿನಿಮಾ ನೋಡದೆ ಅದರ ಬಗ್ಗೆ ಯಾವುದೇ ಅಭಿಪ್ರಾಯ ಮೂಡಿಸಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ನಮ್ಮ ಸಿನಿಮಾ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ಇದು ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುತ್ತದೆ. ಯಾವುದೇ ಧರ್ಮವನ್ನು ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು ನಮ್ಮ ಉದ್ದೇಶವಲ್ಲ” ಎಂದು ಅನ್ನು ಕಪೂರ್ ಹೇಳಿದ್ದಾರೆ.
ಕರ್ನಾಟಕದಲ್ಲೂ ಆಕ್ಷೇಪ
ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ, “ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಶಾಂತಿ ಸೌಹಾರ್ದತೆ ಕದಡುವ ಕೆಲಸ ಈ ಸಿನಿಮಾದಿಂದ ಮಾಡಲಾಗುತ್ತಿದೆ. ಚಿತ್ರೀಕರಣ ಮಾಡಬೇಕು ಅಂದ್ರೆ ಪ್ರಜ್ವಲ್ ರೇವಣ್ಣರವರ ಪೆನ್ ಡ್ರೈವ್ ವಿಷಯ ಮೇಲೆ ಚಿತ್ರ ಮಾಡಲಿ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಿತ್ರ ಮಾಡಲಿ. ಸಾಮಾನ್ಯ ಜನರು ಪಡುತ್ತಿರುವ ಕಷ್ಟಗಳನ್ನು ಅರ್ಥ ಮಾಡಿಕೊಂಡು ಚಿತ್ರೀಕರಣ ಮಾಡಲಿ. ಧರ್ಮವನ್ನು ಮುಂದಿಟ್ಟು ಚಿತ್ರೀಕರಣ ಮಾಡೋದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರ ಚಿತ್ರ ಬಿಡುಗಡೆಗೆ ತಡೆ ಹಾಕಬೇಕು” ಎಂದು ಒತ್ತಾಯಿಸಿದೆ.
ಇದನ್ನೂ ಓದಿ: Pralhad Joshi: ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಾಕುತ್ತಿದ್ದಾರೆ ಸಿದ್ದರಾಮಯ್ಯ: ಜೋಶಿ ಆರೋಪ