ಬಾಗಲಕೋಟೆ: ಹುನಗುಂದ ಪುರಸಭೆಯಲ್ಲಿ ಧರ್ಮ ದಂಗಲ್ ಬಿಸಿ ತಾರಕಕ್ಕೇರಿದೆ. ಈ ಹಿಂದೆ ಅಲ್ಲಿನ ಪುರಸಭೆಯಲ್ಲಿ ಕಾಂಗ್ರೆಸ್‌ನಿಂದ ಪುರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಖುರಾನ್ ಪಠಣ ಮಾಡಿಸಿ ಕಾರ್ಯಾರಂಭ ಮಾಡಲಾಗಿತ್ತು. ಇದು ಒಳಗೊಳಗೆ ಬಿಜೆಪಿ ಸದಸ್ಯರ ಸಹಿತ ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಇದಕ್ಕೆ ಪ್ರತಿಯಾಗಿ ಗೋಮಾತೆ ಪೂಜೆ ನೆರವೇರಿಸಿರುವ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಟಕ್ಕರ್ ನೀಡಿದ್ದಾರೆ.
ಜುಲೈ 14 ರಂದು ಹುನಗುಂದ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಫರ್ವೇಜ್ ಖಾಜಿ ಆಯ್ಕೆ ಆಗಿದ್ದರು. ಆ ವೇಳೆ ತಮ್ಮ ಕೊಠಡಿಯಲ್ಲಿ ಧರ್ಮಗುರುಗಳಿಂದ ಖುರಾನ್ ಪಠಣ ಮಾಡಿಸಿದ್ದರು. ಕಾಂಗ್ರೆಸ್‌ನ ಈ ನಡೆ ಬಿಜೆಪಿ ಸದಸ್ಯರ ಕಣ್ಣನ್ನು ಕೆಂಪಗಾಗಿಸಿತ್ತು. ಇದಕ್ಕೆ ಪ್ರತಿಯಾಗಿ ಬುಧವಾರ (ಆ.24) ಪರಸಭೆಯಲ್ಲಿ ನಡೆದ ಸಾಮಾನ್ಯ ಸಭೆಗೆ ಮುಂಚಿತವಾಗಿ ಬಿಜೆಪಿ ಸದಸ್ಯರು ಗೋ ಪೂಜೆ ನೆರವೇರಿಸಿದ್ದಾರೆ. ಅಲ್ಲದೆ, ಗೋವುಗಳನ್ನು ಸಭಾಂಗಣದೊಳಗೆ ಕರೆದೊಯ್ದು ಓಡಾಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷರಿಗೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ | ಸ್ವಾತಂತ್ರ್ಯ ಲೋಗೊದಲ್ಲಿ ಮಹಲ್, ಮಿನಾರುಗಳ ಮೇಲುಗೈ: ಹಳಿಯಾಳ ಪುರಸಭೆ ಎದುರು ರಾತ್ರಿಯೇ ಪ್ರತಿಭಟನೆ
ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಹುನಗುಂದ ಕ್ಷೇತ್ರದಲ್ಲಿ ಪುರಸಭೆ ಆಡಳಿತ ಹಾಗೂ ವಿಪಕ್ಷಗಳ ಈ ಧರ್ಮ ದಂಗಲ್ ಬಗ್ಗೆ ಹುನಗುಂದ ಪಟ್ಟಣದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಿಜೆಪಿಯ ಶಾಸಕ ದೊಡ್ಡನಗೌಡ ಪಾಟೀಲ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರ ಸಣ್ಣ ಪುಟ್ಟ ವಿಷಯಗಳಿಗೂ ರಾಜಕೀಯ ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಪುರಸಭೆ ಆಡಳಿತದಲ್ಲೂ ಧರ್ಮದ ವಿಚಾರವಾಗಿ ಗೊಂದಲಗಳು ಆರಂಭವಾಗಿವೆ.
ಇದನ್ನೂ ಓದಿ | Independence Day | ಗೋಡ್ಸೆ ಫೋಟೋ ಹಾಕಿ ಸಂಭ್ರಮ; ಒಂದು ದಿನ ಬಳಿಕ ಪುರಸಭೆಯಿಂದ ತೆರವು!