ಚಿಕ್ಕಮಗಳೂರು: ಇದೊಂದು ರೀತಿಯಲ್ಲಿ ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯದಂತೆ ಇತ್ತು. ಅದು ಸೆರೆ ಹಿಡಿದ ನಾಗರಹಾವು ಕಚ್ಚಿ ಮೃತಪಟ್ಟಿದ್ದ ಸ್ನೇಕ್ ನರೇಶ್ (snake catcher) ಮನೆ. ಅಲ್ಲಿ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಆಗ, ಮನೆಯ ಎಲ್ಲೆಲ್ಲಿ ನೋಡಿದರೂ ಹಾವುಗಳ ರಾಶಿ ಕಂಡುಬಂದಿದೆ. ಭಕ್ತ ಪ್ರಹ್ಲಾದನ ಬಳಿ ಆತನ ತಂದೆ ಹಿರಣ್ಯ ಕಶಿಪು ಕೇಳುವಂತೆ “ನಿನ್ನ ಶ್ರೀಹರಿ ಈ ಕಂಬದಲ್ಲಿರುವನೇ, ಆ ಕಂಬದಲ್ಲಿರುವನೇ..” ಎಂಬ ರೀತಿಯಲ್ಲಿ ಸ್ನೇಕ್ ನರೇಶ್ ಮನೆಯಲ್ಲಿ ಹುಡುಕಿದಾಗ ಈ ಬ್ಯಾಗ್‌ನಲ್ಲಿ ಹಾವುಗಳಿವೆಯೇ? ಆ ಬ್ಯಾಗ್‌ನಲ್ಲಿ ಹಾವುಗಳಿವೆಯೇ? ಹೋಗಲಿ ಈ ಬ್ಯಾರೆಲ್? ಈ ಸ್ಕೂಟಿ? ಈ ಕಾರು? ಎಂದು ನೋಡುತ್ತಾ ಹೋದರೆ, ಎಲ್ಲ ಕಡೆಯೂ ಹಾವುಗಳು ಕಂಡು ಬಂದಿವೆ.
ಹೌದು. ಸೆರೆ ಹಿಡಿದ ನಾಗರಹಾವು ಕಚ್ಚಿ ಮೃತಪಟ್ಟಿದ್ದ ಸ್ನೇಕ್ ನರೇಶ್ ಅವರ ಮನೆಯಲ್ಲಿ ಈಗ ಹಾವುಗಳ ರಾಶಿ ರಾಶಿ. ಮನೆಯ ಯಾವ ಮೂಲೆಯಲ್ಲಿ ನೋಡಿದರೂ ಹಾವುಗಳು, ಚೀಲದೊಳಗೆ, ಕಾರು, ಸ್ಕೂಟಿಯೊಳಗೂ ಹಾವುಗಳು ಕಂಡುಬಂದಿದ್ದು, ಸ್ಥಳೀಯರು ಹೌಹಾರಿದ್ದಾರೆ.
ಇದನ್ನೂ ಓದಿ: Rahul Gandhi: 1980ರಲ್ಲಿ ದಲಿತರಿಗೆ ಆದಂತೆ ಈಗ ಮುಸ್ಲಿಮರ ಮೇಲೆ ದೌರ್ಜನ್ಯ; ಅಮೆರಿಕದಲ್ಲಿ ರಾಹುಲ್ ಗಾಂಧಿ ಚಾಟಿ
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಸ್ನೇಕ್ ನರೇಶ್ ಮನೆಯಲ್ಲಿ ಈ ಪರಿ ಹಾವುಗಳ ರಾಶಿ ಕಂಡುಬಂದಿವೆ. ನೂರಾರು ಹಾವುಗಳು ಈ ಮನೆಯಲ್ಲಿ ವಾಸವಾಗಿದ್ದು, ಸ್ನೇಕ್ ನರೇಶ್ ಇದರೊಂದಿಗೇ ಇಷ್ಟು ದಿನ ಜೀವನ ನಡೆಸುತ್ತಿದ್ದರಾ ಎಂದು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ.
ನಾಗರಹಾವು ಕಚ್ಚಿ ಉರಗ ತಜ್ಞ ನರೇಶ್ ಸಾವು ಹಿನ್ನೆಲೆಯಲ್ಲಿ ಅವರ ಮನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಾಗಿತ್ತು. ಆಗ ಅವರ ಮನೆಯಲ್ಲಿ ನೂರಾರು ನಾಗರ ಹಾವುಗಳು ಪತ್ತೆಯಾಗಿವೆ. ನಾಗರಹಾವು ಸೇರಿದಂತೆ ಬೇರೆ ಬೇರೆ ಜಾತಿಯ ನೂರಾರು ಹಾವಿನ ಮರಿಗಳು ಪತ್ತೆಯಾಗಿವೆ.
ಮನೆಯಲ್ಲಿ ಹಾವುಗಳ ರಾಶಿ ಕಂಡು ಪೊಲೀಸರು, ಸ್ಥಳೀಯರು ಶಾಕ್ ಆಗಿದ್ದಾರೆ. ಬ್ಯಾರಲ್, ಚೀಲಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಮನೆ ಸೇರಿದಂತೆ ಕಾರು, ಸ್ಕೂಟಿಗಳಲ್ಲೂ ನಾಗರಹಾವುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಈಗ ಹಾವುಗಳ ರಕ್ಷಣೆ ಮಾಡಲಾಗಿದೆ. ಈಗ ನಾಗರಹಾವುಗಳನ್ನು ರಕ್ಷಿಸಿ ಮನೆಯಿಂದ ಕೊಂಡೊಯ್ಯಲಾಗಿದೆ.
ಇದನ್ನೂ ಓದಿ: Dolly Dhananjay: ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ತಪ್ಪಿಲ್ಲ: ಕಾಂಗ್ರೆಸ್ ಗ್ಯಾರಂಟಿ ಬೆಂಬಲಿಸಿದ ಡಾಲಿ ಧನಂಜಯ
ಅಕ್ಕಪಕ್ಕದ ಮನೆಯವರಲ್ಲಿ ಹೆಚ್ಚಿದ ಆತಂಕ
ಈ ವಿಷಯ ಕೇಳಿ, ಕಂಡ ಅಕ್ಕಪಕ್ಕದ ಮನೆಯವರು ಈಗ ಆತಂಕಿತರಾಗಿದ್ದಾರೆ. ಮನೆಯ ಕಿಟಕಿ, ಬಾಗಿಲನ್ನು ತೆಗೆಯಲೂ ಭಯ ಪಡುತ್ತಿದ್ದಾರೆ ಎನ್ನಲಾಗಿದೆ. ನೂರಾರು ಹಾವುಗಳು ಆತನೊಬ್ಬನ ಮನೆಯಲ್ಲಿಯೇ ಪತ್ತೆಯಾಗಿರುವುದರಿಂದ ಮುಂದೇನಾಗಲಿದೆ? ಎಲ್ಲ ಹಾವುಗಳನ್ನೂ ರಕ್ಷಣೆ ಮಾಡಲಾಗಿದೆಯಾ? ಅಥವಾ ಯಾವುದಾದರೂ ಹಾವುಗಳು ಉಳಿದುಕೊಂಡಿದ್ದರೆ, ತಮ್ಮ ಮನೆಯತ್ತ ಬಂದರೆ ಎಂಬ ಆತಂಕದಲ್ಲಿ ಬದುಕುವಂತಾಗಿದೆ.