ಮಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ (Triple Talaq) ನಿಷೇಧವಾಗಿ, ಶಿಕ್ಷಾರ್ಹ ಅಪರಾಧ ಎನ್ನಿಸಿ ಮೂರು ವರ್ಷದ ಮೇಲಾದರೂ ಇನ್ನೂ ಅಲ್ಲೊಂದು-ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಮಂಗಳೂರಿನಲ್ಲಿ ಮಹಮ್ಮದ್ ಹುಸೇನ್ ಎಂಬಾತ ತನ್ನ ಪತ್ನಿ ಶಬಾನಾಗೆ ಮೂರು ಸಲ ತಲಾಖ್ ಹೇಳಿ, ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ. ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಬಾನಾ, ಪತಿ ಹುಸೇನ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಮಹಮ್ಮದ್ ಹುಸೇನ್ ಮತ್ತು ಶಬಾನಾ ಇಬ್ಬರಿಗೂ ಇದು ಎರಡನೇ ಮದುವೆ. ಇವರಿಬ್ಬರೂ ವಿಚ್ಛೇದಿತರು. ಶಬಾನಾಗೆ ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳು ಇದ್ದರು. ಆರು ತಿಂಗಳ ಹಿಂದಷ್ಟೇ ಮಾರ್ನಮಿಕಟ್ಟೆಯ ಹುಸೇನ್ ಜತೆ ಮತ್ತೆ ದಾಂಪತ್ಯ ಶುರು ಮಾಡಿದ್ದರು. ಆದರೆ ಮದುವೆಯಾದ ಕೆಲವೇ ದಿನದಲ್ಲಿ ಅವನ ನಿಜ ಸ್ವರೂಪ ದರ್ಶನವಾಗಲು ಶುರುವಾಯಿತು. ಎಂಟೇ ದಿನದಲ್ಲಿ ಶಬಾನಾಳಿಂದ ಒಡವೆ ಮತ್ತು 10 ಲಕ್ಷ ರೂಪಾಯಿಯನ್ನು ಆಕೆಯ ತಾಯಿ ಮನೆಯಿಂದ ತರಿಸಿಕೊಂಡಿದ್ದ. ಗರ್ಭಿಣಿಯಾದ ಆಕೆಗೆ ಮಾತ್ರೆ ನುಂಗಿಸಿ ಗರ್ಭಪಾತ ಮಾಡಿಸಿದ್ದ. ಪ್ರತಿದಿನ ಒಂದಲ್ಲ ಒಂದು ಹಿಂಸೆ ಕೊಡುತ್ತಲೇ ಇದ್ದ. ಕೆಟ್ಟ ಪದಗಳಿಂದ ನಿಂದಿಸುತ್ತಿದ್ದ. ಅಂತಿಮವಾಗಿ ತಲಾಖ್ ಹೇಳಿದ್ದಾನೆ ಎಂದು ಶಬಾನಾ, ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಲಿಂಗಪರಿವರ್ತಿತ ಮಹಿಳೆಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ; ಪರಿಹಾರಕ್ಕೆ ಅರ್ಹಳು ಎಂದ ಕೋರ್ಟ್
ಮೊದಲ ಪತ್ನಿಗೂ ಹೀಗೆ ಹಿಂಸೆ ನೀಡಿ, ತಲಾಖ್ ಹೇಳಿದ್ದ ಹುಸೇನ್ ಈಗ ಎರಡನೇ ಪತ್ನಿ ಶಬಾನಾಗೂ ತಲಾಖ್ ಹೇಳಿದ್ದಾನೆ. ಆಕೆಯ ಎರಡು ಮಕ್ಕಳೊಂದಿಗೆ ಹೊರಗೆ ಹಾಕಿದ್ದಾನೆ. ಪತ್ನಿ ಶಬಾನಾ ಮಾಧ್ಯಮದವರ ಎದುರು ಕಣ್ಣೀರು ಹಾಕಿದ್ದಾರೆ. ‘ನನ್ನ ಗಂಡನಿಗೆ ಬೇರೆ ಹೆಂಗಸರ ಸಹವಾಸ ಇದೆ. ಇವನಷ್ಟೇ ಅಲ್ಲ, ಅತ್ತೆ-ಮಾವ ಕೂಡ ನನ್ನನ್ನು ಹಿಂಸಿಸಿದ್ದಾರೆ. ನನ್ನ ಗಂಡ ನನ್ನ ಬಲ ಎದೆಗೆ ಗುದ್ದಿದ್ದಾನೆ, ಕೆಳಹೊಟ್ಟೆಗೆ ಒದ್ದಿದ್ದಾನೆ’ ಎಂದು ದೂರಿನಲ್ಲಿ ಹೇಳಿದ್ದಾರೆ. ‘ನಾನು ಏಪ್ರಿಲ್ನಲ್ಲಿ ಗರ್ಭಿಣಿಯಾಗಿದ್ದೆ. ಆದರೆ ಈಗಲೇ ಪ್ಲ್ಯಾನ್ ಇಲ್ಲ ಎಂದು ಅದನ್ನು ತೆಗೆಸಿದ’ ಎಂದು ಆರೋಪಿಸಿದ್ದಾರೆ.