ಚಿಕ್ಕಬಳ್ಳಾಪುರ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ (Rama Mandir) ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ. ಆದರೆ, ಹೋಗಲಾಗುತ್ತಿಲ್ಲ, ಇದು ದುರದೃಷ್ಟಕರ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಹೇಳಿದ್ದಾರೆ.
ಸಂಕ್ರಾಂತಿ ಹಬ್ಬದ ಅಂಗವಾಗಿ ಈಶ ಯೋಗ ಕೇಂದ್ರದಲ್ಲಿ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಾತನಾಡಿದ ಅವರು, ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿತ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯ ರಾಮಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ. ಇದು ನನ್ನ ದುರದೃಷ್ಟ ನಾನು ಹೋಗಲಾಗುತ್ತಿಲ್ಲ ಎಂದು ತಿಳಿಸಿದರು.
ದೇವಾಲಯ ಎನ್ನೋದು ಎಂದೂ ಮುಗಿಯಲ್ಲ
ಅಪೂರ್ಣ ಮಂದಿರ ಉದ್ಘಾಟನೆ ಸಂಬಂಧ ಕೆಲ ಮಠಾಧೀಶರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸದ್ಗುರುಗಳು, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಲ್ಲ ಅನಿಸುತ್ತೆ. ಸ್ವಲ್ಪ ಮಾಡಿದರೂ ಬಹಳ ಮಾಡಿದೆ ಅಂತ ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರಲ್ಲ. ಜಾಸ್ತಿ ಮಾಡಿದರೂ ಇನ್ನೂ ಮಾಡಬೇಕು ಎನ್ನುವವರ ಹೃದಯದಲ್ಲಿ ಪ್ರೀತಿ ಇರಲಿದೆ. ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ಮಾಡ್ತಾನೆ ಇದ್ರೆ ಮಾಡ್ತಾನೆ ಇರಬೇಕು. ಭಕ್ತನ ಆಶಯವೂ ಅದು. ಈಗ ಅದು ಮೂರು ಅಂತಸ್ತು ಇದೆ. ಒಂದು ಅಂತಸ್ಥು ಕಂಪ್ಲೀಟ್ ಆಗಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಠಾಪನೆ ಆಗಲಿದೆ. ಮುಂದೆ ಉಳಿದ ಎಲ್ಲವೂ ಮಾಡಲಿದ್ದಾರೆ. ಹಾಗಾಗಿ ಅದು ಅಪೂರ್ಣ ಅಲ್ಲ ಅಂತ ಹೇಳಿದರು.
ಇದನ್ನೂ ಓದಿ | Isha Foundation: ಈಶ ಫೌಂಡೇಶನ್‌ನಲ್ಲಿ ನಂದಿ ವಿಗ್ರಹ, ಮಹಾಶೂಲ ಪ್ರತಿಷ್ಠಾಪನೆ; ಸಾವಿರಾರು ಮಂದಿ ಭಾಗಿ
ಕರ್ನಾಟಕ, ತಮಿಳುನಾಡು ಸರ್ಕಾರ ನದಿ ಉಳಿಸುವ ಕೆಲಸ ಮಾಡುತ್ತಿಲ್ಲ
ಕಾವೇರಿ ವಿಚಾರದಲ್ಲಿ ಕರ್ನಾಟಕದ-ತಮಿಳುನಾಡು ಸರ್ಕಾರ ಜಗಳವಾಡುತ್ತಿವೆಯೇ ಹೊರತು ನದಿ ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳಿದರು. ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ನೀರಿಗಾಗಿ ಜಗಳ ನಡೆಯುತ್ತಲೇ ಇರುತ್ತವೆ. ಸಮುದ್ರ ಸೇರುವ ಮುನ್ನವೇ 175 ಕಿಲೋಮೀಟರ್ ಹಿಂದೆಯೇ 4 ತಿಂಗಳ ಕಾಲ ಕಾವೇರಿ ಒಣಗಿ ಹೋಗುತ್ತಿದೆ. ತಮಿಳುನಾಡಿನವರು ನೀರು ಬಿಡುತ್ತಿಲ್ಲ ಅಂತ ಬಾಯಿ ಬಡ್ಕೋತಾರೆ. ಕರ್ನಾಟಕದವರು ನಾವು ಕೊಡಲ್ಲ ಅಂತಿವಿ. ಅವ್ರಿಗೆ ಕೊಟ್ರೆ ಇಲ್ಲಿಲ್ಲ. ಇಲ್ಲಿ ಉಳಿಸಿಕೊಂಡರೆ ಅವರಿಗಿರಲ್ಲ. ಜಗಳ ಮಾಡೋದ್ರಲ್ಲಿ ಕಾಲ ಕಳೆಯುತ್ತಿದ್ದೇವೆ. ಆದ್ರೆ ಕಾವೇರಿಯಲ್ಲಿ ಯಾಕೆ ನೀರಿಲ್ಲ ಅಂತ ಯಾರೂ ಯೋಚನೆ ಮಾಡುತ್ತಿಲ್ಲ. ಸಾವಿರಾರು ವರ್ಷಗಳ ನದಿ ಈಗ ಯಾಕೆ ನೀರಿಲ್ಲ. ಮೊದಲಿಗಿಂತ ಈಗಲೂ ಹೆಚ್ಚು ಮಳೆ ಬರುತ್ತಿದೆ, ಅದರೆ ಯಾಕೆ ನೀರಿಲ್ಲ. ಮಣ್ಣಿನಲ್ಲಿ ನೀರು ಹಿಡಿದುಕೊಳ್ಳುವ ಶಕ್ತಿ ಇಲ್ಲ ಅಂತ ತಮ್ಮ ಅಭಿಪ್ರಾಯ ತಿಳಿಸಿದರು.