ಬೆಳಗಾವಿ: ಮಧ್ಯಪ್ರದೇಶದ ಮೊರೆನಾದಲ್ಲಿ ಯುದ್ಧ ವಿಮಾನಗಳ (IAF Fighter Jets Crash) ತಾಲೀಮು ಹಾರಾಟ ನಡೆಸುವ ವೇಳೆ ಸಂಭವಿಸಿದ ದುರಂತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಹುತಾತ್ಮರಾಗಿದ್ದಾರೆ. ಸಾರಥಿ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಮಗನನ್ನು ನೆನೆದು ತಾಯಿ ಸಾವಿತ್ರಮ್ಮ, ತಂದೆ ರೇವಣಸಿದ್ದಪ್ಪ, ಸಹೋದರಿ ಡಾ.ಪ್ರತಿಮಾ ಕಣ್ಣೀರು ಇಡುತ್ತಿದ್ದಾರೆ.
ವಿಂಗ್ ಕಮಾಂಡರ್ ಸಾರಥಿ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಬೆಳಗಾವಿಗೆ ವಿಮಾನ ಮೂಲಕ ತರಲಾಗುತ್ತಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಏರ್‌ಫೋರ್ಸ್ ಸಿಬ್ಬಂದಿ ಪಾರ್ಥಿವ ಶರೀರಕ್ಕೆ ಗೌರವ ವಂದನೆ ಸಲ್ಲಿಸಲಿದ್ದಾರೆ. ಆ ಬಳಿಕ ಬೆಳಗಾವಿಯ ಗಣೇಶಪುರದ ಸಾರಥಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನ ಸಲ್ಲಿಸಿದ ಬಳಿಕ ಹುತಾತ್ಮ ವೀರ ಯೋಧನಿಗೆ ಗಣೇಶಪುರ ನಿವಾಸದಿಂದ ಬೆನಕನಹಳ್ಳಿ ಗ್ರಾಮದವರೆಗೂ ಅಂತಿಮ ಯಾತ್ರೆ ನಡೆಸಲಾಗುತ್ತದೆ. ಬೆನಕನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಇಡೀ ಕುಟುಂಬವೇ ದೇಶ ಸೇವೆಯ ಸಾರಥಿಗಳು
ಹುತಾತ್ಮ ವೀರ ಯೋಧ ಹನುಮಂತರಾವ್ ಸಾರಥಿ ಅವರ ಇಡೀ ಕುಟುಂಬವೇ ತಮ್ಮನ್ನ ತಾವು ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ವೇಳೆ ಯೋಧ ಹನುಮಂತರಾವ್ ರಿಸರ್ವ್ ಟೀಮ್ ಹಾಗೂ ಪಠಾಣಕೋಟ್ ಏರ್ ಬೇಸ್‌ನಲ್ಲಿದ್ದರು. ಹನುಮಂತರಾವ್ ಅವರ ತಂದೆ ರೇವಣಸಿದ್ಧಪ್ಪ ಕೂಡ 32 ವರ್ಷ ಕಾಲ ಭಾರತೀಯ ಸೇನೆ ಸೇವೆ ಸಲ್ಲಿಸಿದ್ದಾರೆ. ರೇವಣಸಿದ್ದಪ್ಪನವರ ಹಿರಿಯ ಪುತ್ರ ಪ್ರವೀಣ ಇಂಡಿಯನ್ ಏರ್ ಫೋರ್ಸ್‌ನ ಗ್ರೂಪ್ ಕ್ಯಾಪ್ಟನ್ ಆಗಿದ್ದರೆ, ಪ್ರವೀಣ ಅವರ ಪತ್ನಿ ಏರ್ ಫೋರ್ಸ್‌ನಲ್ಲಿ ಪೈಲಟ್ ಆಫೀಸರ್ ಆಗಿದ್ದಾರೆ. ಕಿರಿಯ ಪುತ್ರ ಹನುಮಂತ ರಾವ್ ಇಂಡಿಯನ್ ಏರ್ ಫೋರ್ಸ್ ವಿಂಗ್ ಕಮಾಂಡರ್ ಆಗಿದ್ದರೆ, ಇವರ ಪತ್ನಿ ಏರ್ ಪೋರ್ಸ್‌ನಲ್ಲಿ ಅಕೌಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಬೃಹದಾಕಾರದ ಭಾವಚಿತ್ರಕ್ಕೆ ನಮಿಸಿದ ಸ್ನೇಹಿತರು
ಗಣೇಶಪುರದ ಸಂಭಾಜಿ ನಗರದಲ್ಲಿರುವ ಸಾರಥಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಬೀದರ್ ಏರ್‌ಬೇಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹನುಮಂತ ರಾವ್ ಸಾರಥಿ ಅವರ ದೊಡ್ಡ ಗಾತ್ರದ ಫೋಟೋ ಮೇಲೆ ಶುಭ ಸಂದೇಶ ಬರೆದು ಸಹೋದ್ಯೋಗಿಗಳು ಉಡುಗೊಡೆಯಾಗಿ ನೀಡಿದ್ದರು. ಸದ್ಯ ಅದೇ ಫೋಟೊಗೆ ಪುಷ್ಪಾಲಂಕಾರ ಮಾಡಿ ಸ್ನೇಹಿತರು, ಕುಟುಂಬಸ್ಥರು ನಮಿಸಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಮಗ ನಮ್ಮನ್ನು ಬಿಟ್ಟು ಹೋಗಿದ್ದು ಸಂಕಟವಾಗುತ್ತಿದೆ. ಆದರೆ ನಮ್ಮ ಮಕ್ಕಳು ದೇಶ ಸೇವೆ ಮಾಡುತ್ತಿದ್ದಾರೆ ಎಂದು ನಮಗೆ ಹೆಮ್ಮೆ ಇದೆ. 18ನೇ ವಯಸ್ಸಿಗೆ ವಾಯು ಸೇನೆಗೆ ಹನುಮಂತರಾವ್ ಸಾರಥಿ ಆಯ್ಕೆಯಾಗಿ, ಬಳಿಕ ವಾಯುಸೇನೆಯಲ್ಲಿಯೇ ಪುಣೆಯಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡಿದ್ದರು. ಹೈದರಾಬಾದ್ ಏರ್‌ಪೋರ್ಸ್ ಅಕಾಡೆಮಿಗೆ ತೆರಳಿ ಬಳಿಕ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಏನಿದು ವಿಮಾನ ದುರಂತ?
ಮಧ್ಯಪ್ರದೇಶ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆದ ಸುಖೋಯ್ 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ತಾಲೀಮು ಹಾರಾಟ ನಡೆಸುವ ವೇಳೆ ಕೆಲವೇ ಹೊತ್ತಲ್ಲಿ ಪತನಗೊಂಡಿತ್ತು. ಇದರಲ್ಲಿ ಸುಖೋಯ್ 30 ವಿಮಾನ ಮಧ್ಯಪ್ರದೇಶದ ಮೊರೆನಾ ಬಳಿಯೇ ಬಿದ್ದಿದ್ದರೆ, ಇಲ್ಲಿಂದ 100 ಕಿಮೀ ದೂರದಲ್ಲಿರುವ ರಾಜಸ್ಥಾನದ ಭರತ್ಪುರದಲ್ಲಿ ಮಿರಾಜ್ 2000 ವಿಮಾನ ಬಿದ್ದು, ಬೆಂಕಿ ಹೊತ್ತಿ ಉರಿದಿತ್ತು.
ಇದನ್ನೂ ಓದಿ: IAF Fighter Jets Crash: ಮಧ್ಯಪ್ರದೇಶದಲ್ಲಿ ಐಎಎಫ್ ವಿಮಾನ ಪತನ; ಮೃತಪಟ್ಟಿದ್ದು ಬೆಳಗಾವಿ ಮೂಲದ ವಿಂಗ್ ಕಮಾಂಡರ್
ಮಿರಾಜ್ ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಹನುಮಂತ ರಾವ್ ಮೃತಪಟ್ಟಿದ್ದರೆ, ಸುಖೋಯ್ನಲ್ಲಿದ್ದ ಇಬ್ಬರೂ ಪೈಲಟ್ಗಳು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.