ಬೆಳಗಾವಿ: ಗ್ವಾಲಿಯರ್ ಸಮೀಪ ನಡೆದ ವಾಯುಪಡೆಯ ಯುದ್ಧ ವಿಮಾನಗಳ (IAF Fighter Jets Crash) ಪತನ ವೇಳೆ ಹುತಾತ್ಮರಾದ ಪೈಲಟ್, ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರಿಗೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಹುತಾತ್ಮ ಹನುಮಂತರಾವ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಂತಿಮ ದರ್ಶನ ಮಾಡಿ, ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಯಡಿಯೂರಪ್ಪ ಅವರ ಜತೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಇದ್ದರು.
ಯೋಧನ ಪಾರ್ಥೀವ ಶರೀರವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್, ಮತ್ತಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಗಣೇಶಪುರ ಬಡಾವಣೆ ಸಂಪೂರ್ಣ ಸ್ತಬ್ಧ
ಪಾರ್ಥೀವ ಶರೀರವು ಸ್ವಗ್ರಾಮಕ್ಕೆ ಬಂದೊಡನೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತಿಮ ಯಾತ್ರೆ ಉದ್ದಕ್ಕೂ ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಬೆಳಗಾವಿಯ ಗಣೇಶಪುರ ವೃತ್ತದಿಂದ ನಿವಾಸದವರೆಗೆ ಸಾರ್ವಜನಿಕರು ರಸ್ತೆಯ ಎರಡು ಬದಿಯಲ್ಲಿ ನಿಂತು ಹೂ ಹಾಕಿ ನಮನ ಸಲ್ಲಿಸಿದರು. ಹನುಮಂತರಾವ್ ಅಮರ ರಹೇ ಅಮರ ರಹೇ ಎಂದು ಘೋಷಣೆ ಕೂಗಿದರು. ಹುತಾತ್ಮ ಯೋಧನಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಸ್ವಯಂಪ್ರೇರಣೆಯಿಂದ ಅಂಗಡಿಮುಂಗಟ್ಟು ಬಂದ್ ಮಾಡಿದ್ದರು. ಗಣೇಶಪುರ ಬಡಾವಣೆ ಸಂಪೂರ್ಣ ಸ್ತಬ್ಧವಾಗಿ ನೀರವ ಮೌನ ಆವರಿಸಿತ್ತು.
ದೇಶಕ್ಕೆ ತುಂಬಲಾರದ ನಷ್ಟ- ಜಿಲ್ಲಾಧಿಕಾರಿ ಪಾಟೀಲ ಸಂತಾಪ
ಗ್ವಾಲಿಯರ್‌ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ನಿಧನರಾದ ವಿಷಯ ತಿಳಿದು ತುಂಬ ದುಃಖವಾಯಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Star Beauty Secret: ನ್ಯಾಚುರಲ್ ಆಗಿರಲು ಬಯಸುವ ರಾಧಿಕಾ ಆಪ್ಟೆ
ಹೆಮ್ಮೆಯ ಯೋಧ ಹನುಮಂತ ರಾವ್ ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾಧಿಕಾರಿ ಪಾಟೀಲ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.