ವಿಜಯನಗರ: ಓದಿದ್ದು ಬಿ.ಟೆಕ್ ಪದವಿ, ಆಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ. ಮಾಡಿರುವ ಅಭಿವೃದ್ಧಿ ದೇಶಕ್ಕೇ ಮಾದರಿ. ಈಗ ಇವರಿಂದ ೫೦೦ ಮಂದಿ ಭಾವಿ ಐಎಎಸ್ ಅಧಿಕಾರಿಗಳಿಗೆ ತರಬೇತಿ (IAS Coaching Camp) ಸಿಗಲಿದೆ.
ಇಲ್ಲಿನ ನಂದಿಹಳ್ಳಿ ಹೂವಿನಹಡಗಲಿಯ ದೇವಗೊಂಡನಹಳ್ಳಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಂದಿಹಳ್ಳಿ ಮಹೇಂದ್ರ ಎಂಬುವವರು ಉತ್ತರಾಖಂಡದ ಮಸ್ಸೂರಿಗೆ ತೆರಳಿ ಭಾವಿ ಐಎಎಸ್‌ಗಳಿಗೆ ತರಬೇತಿ ನೀಡಲಿದ್ದಾರೆ. ಇದೇ ಆಗಸ್ಟ್ 29ಕ್ಕೆ ಉತ್ತರಾಖಂಡಕ್ಕೆ ತೆರಳಲಿರುವ ಅವರು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ ಅಡಿ ಮಳೆ ನೀರು ಕೊಯ್ಲು (ಕ್ಯಾಚ್ ದಿ ರೇನ್), ಜಲಶಕ್ತಿ ಅಭಿಯಾನ, ಅಮೃತ ಸರೋವರ ಕೆರೆ ನಿರ್ಮಾಣ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರಕ್ಕಾಗಿ ಕೈತೋಟ ನಿರ್ಮಾಣ ಸೇರಿದಂತೆ ಹಳ್ಳಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್, ಹಳ್ಳಿಗಳಲ್ಲೂ ಡಿಜಿಟಲ್ ಗ್ರಂಥಾಲಯ, ಮಾದರಿ ಶಾಲೆ ಬಗ್ಗೆ ತರಬೇತಿ ನೀಡಲಿದ್ದಾರೆ.
ಒತ್ತುವರಿಯಾದಲ್ಲಿಯೇ ಕೆರೆ ನಿರ್ಮಾಣ ಮಾಡಿ ಸೈ ಎನಿಸಿಕೊಂಡ ಅಧ್ಯಕ್ಷ
ಬಿ.ಟೆಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿರುವ ಅಧ್ಯಕ್ಷ ಮಹೇಂದ್ರ ಅವರು ಗುಜನೂರು ಗ್ರಾಮದಲ್ಲಿ ನರೇಗಾ ಅಡಿ ಸರ್ಕಾರದ 2.37 ಸೆನ್ಸ್ ಭೂಮಿ ಒತ್ತುವರಿಯಾಗಿದ್ದ ಜಾಗದಲ್ಲಿಯೇ ಮೀನಿನಾಕಾರದ ಕೆರೆ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಕೆರೆ ನಿರ್ಮಾಣ ವಿಚಾರ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಒತ್ತುವರಿಯಾದ ಜಮೀನನ್ನು ಸರ್ವೇ ಮಾಡಿಸಿ ಬಳಿಕ ಒತ್ತುವರಿ ಆದ ಜಾಗವನ್ನು ಗ್ರಾ.ಪಂ ವ್ಯಾಪ್ತಿಗೆ ಪಡೆದುಕೊಂಡರು. ಆನಂತರ ನರೇಗಾ ಯೋಜನೆ ಅಡಿ ಕೆರೆ ನಿರ್ಮಾಣ ಯೋಜನೆಯನ್ನು ಪಂಚಾಯತ್ ವತಿಯಿಂದ ಹಾಕಿಕೊಂಡು, ಕೇಂದ್ರ ಸರ್ಕಾರ ಜಾರಿಗೆ ತಂದ ಅಮೃತ ಸರೋವರ ಯೋಜನೆ ಅಡಿ ಸುಸಜ್ಜಿತ ಕೆರೆ ನಿರ್ಮಾಣ ಮಾಡಿರುವುದಾಗಿ ಮಹೇಂದ್ರ ತಿಳಿಸಿದ್ದಾರೆ. ಕೆರೆಯಲ್ಲಿ 80 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಇದರಿಂದ ದೇವಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳ ಆಗಿರುವುದಾಗಿ ತಿಳಿಸಿದ್ದಾರೆ.
ಮಹೇಂದ್ರ ಅವರ ಈ ಎಲ್ಲ ವಿಶೇಷತೆಯನ್ನು ಗಮನಿಸಿ, ಐಎಎಸ್ ಅಧಿಕಾರಿಗಳಿಗೆ ತರಬೇತಿಗಾಗಿ ಕೇಂದ್ರ ಸರ್ಕಾರದಿಂದ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ | Vijayapura Earthquake | ವಿಜಯಪುರದಲ್ಲಿ ಸರಣಿ ಭೂಕಂಪನ; ತಜ್ಞರ ಭೇಟಿ, ಭಯಗೊಳ್ಳದಂತೆ ಸಲಹೆ