Site icon Vistara News

BDA: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐಎಎಸ್‌ ಅಧಿಕಾರಿ ನೇಮಕ; ಆಕಾಂಕ್ಷಿ ಶಾಸಕರಿಗೆ ಕಾಂಗ್ರೆಸ್‌ ಬಿಗ್‌ ಶಾಕ್!

BDA Rakesh singh

ಬೆಂಗಳೂರು: ಆಯಕಟ್ಟಿನ ಹುದ್ದೆಗಳಲ್ಲಿ ಬಹುಮುಖ್ಯವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಐಎಎಸ್​ ಅಧಿಕಾರಿ ರಾಕೇಶ್​ ಸಿಂಗ್ (Rakesh Singh)​ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಗುರುವಾರ (ಜೂನ್‌ 8) ಆದೇಶ ಹೊರಡಿಸಿದೆ. ಈ ಮೂಲಕ ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಲಾಬಿಗೆ ತೆರೆ ಎಳೆದಿದೆ. ನಿಗಮ ಮಂಡಳಿಗಳಲ್ಲಿ ಅತ್ಯಂತ ʼಫಲವತ್ತಾದʼ ಹುದ್ದೆ ಎಂದೇ ಪರಿಗಣಿತವಾಗಿರುವ ಸ್ಥಾನಕ್ಕೆ ಶಾಸಕರನ್ನು ನೇಮಿಸುವುದು ಪರಿಪಾಠ. ಈ ಸ್ಥಾನಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅದ್ಯಾವುದನ್ನೂ ಲೆಕ್ಕಿಸದೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸುವ ಮೂಲಕ ಆಕಾಂಕ್ಷಿಗಳಿಗೆ ಶಾಕ್‌ ನೀಡಿದೆ.

ಶಾಂತಿನಗರದ ಶಾಸಕ ಎನ್‌.ಎ. ಹ್ಯಾರಿಸ್ ಹಾಗೂ ಗೋವಿಂದರಾಜನಗರದ ಶಾಸಕ ಪ್ರಿಯಾಕೃಷ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹಾಗಾಗಿ ಇವರು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಈಗ ಸರ್ಕಾರ ಐಎಎಸ್​ ಅಧಿಕಾರಿಯನ್ನು ನೇಮಿಸಿದೆ.

ರಾಕೇಶ್​ ಸಿಂಗ್​ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಸಿದ್ದಲ್ಲದೆ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಲಾಗಿದೆ. ಜತೆಗೆ ಈ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿಯೂ ಅವರನ್ನು ನೇಮಿಸಲಾಗಿದೆ.

  1. ಆನೇಕಲ್ ಯೋಜನಾ ಪ್ರಾಧಿಕಾರ
  2. ಹೊಸಕೋಟೆ ಯೋಜನಾ ಪ್ರಾಧಿಕಾರ
  3. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ
  4. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ
  5. ಮಾಗಡಿ ಯೋಜನಾ ಪ್ರಾಧಿಕಾರ
  6. ಚನ್ನಪಟ್ಟಣ ಯೋಜನಾ ಪ್ರಾಧಿಕಾರ
  7. ಕನಕಪುರ ಯೋಜನಾ ಪ್ರಾಧಿಕಾರ
  8. ನೆಲಮಂಗಲ ಯೋಜನಾ ಪ್ರಾಧಿಕಾರ
  9. ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
  10. ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರ

ಪ್ರಿಯಾಕೃಷ್ಣ, ಹ್ಯಾರಿಸ್‌ ನಡೆ ಏನು?

ಶಾಸಕರಾದ ಪ್ರಿಯಾಕೃಷ್ಣ ಹಾಗೂ ಹ್ಯಾರಿಸ್‌ ಅವರ ನಡೆ ಈಗ ನಿಗೂಢವಾಗಿದೆ. ಈ ಹಿಂದೆ ಟ್ವೀಟ್‌ ಮಾಡಿದ್ದ ಪ್ರಿಯಾಕೃಷ್ಣ ತಾವು ಬಿಡಿಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಿಕೊಂಡಿದ್ದರು. ಆದರೂ, ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು.

Exit mobile version