Site icon Vistara News

ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ

ಬೆಂಗಳೂರು: ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ೧೦ ಪ್ರದೇಶಗಳನ್ನು ಗುರುತಿಸಲಾಗಿದೆ. ಕಳೆದ ವಾರ ಗೊರಗುಂಟೆಪಾಳ್ಯ, ಹೆಬ್ಬಾಳ, ಕೆಆರ್ ಪುರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಮಂಗಳವಾರ ತಡರಾತ್ರಿ ಸಿಲ್ಕ್ ಬೋರ್ಡ್, ‌ಇಬ್ಬಲೂರು, ಸಾರಕ್ಕಿ ಜಂಕ್ಷನ್‌ಗಳಿಗೆ ಭೇಟಿ ನೀಡಿ ವೀಕ್ಷಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಸಿಂಧೂರ ರಸ್ತೆ-ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ಅಳವಡಿಸಿದ ರಸ್ತೆ ನಾಮಫಲಕ, ಪಾದಚಾರಿ ಮಾರ್ಗ ಸರಿಪಡಿಸಿ ವಾಹನಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ನೀಡಲು, ಬಿಎಂಆರ್‌ಸಿಎಲ್ ಪಿಲ್ಲರ್‌ಗೆ ಅಳವಡಿಸಿದ ಸಿಗ್ನಲ್ ಲೈಟ್ ಇನ್ನೂ ಮೂರು ಅಡಿಗೆ ಎತ್ತರಿಸಲು ಸೂಚಿಸಲಾಗಿದೆ. ಕನಕಪುರ ಮುಖ್ಯ ರಸ್ತೆಯ ಮಧ್ಯ ಪಾದಚಾರಿ ಮಾರ್ಗಕ್ಕೆ ಗ್ರೀಲ್, ಕಂಬ ಅಳವಡಿಸಿ, ಅಲ್ಲಲ್ಲಿ ಹಾಳಾಗಿರುವ ಪಾದಚಾರಿ ಮಾರ್ಗ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ರಸ್ತೆ ಬದಿ ಮರಗಳ‌ ಕೊಂಬೆ ಕತ್ತರಿಸಬೇಕಿದೆ. ಬೆಸ್ಕಾಂ ಅಳವಡಿಸಿರುವ ಸಿಮೆಂಟ್ ಕಂಬ ಸ್ಥಳಾಂತರಿಸಿ, ಸರ್ವಿಸ್ ರಸ್ತೆಯನ್ನು ರಿಂಗ್ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಲು ಕ್ರಮವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಯದೇವ ಮೇಲ್ಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ರೋಡ್ ಸರ್ಫೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪಗಳನ್ನು ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ತಪ್ಪಿಸಲು ನಡೆಯುತ್ತಿರುವ ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಕೆಲವೆಡೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವ ಜತೆಗೆ ಸರ್ವಿಸ್ ರಸ್ತೆ ಬದಿ ಹಾಕಲಾದ ಕಟ್ಟಡ ಅವಶೇಷಗಳನ್ನು ತೆರವುಗೊಳಿಸುವಂತೆ ಮೆಟ್ರೋ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಧಾನಿ ಸೂಚನೆ; ಹಿರಿಯ ಅಧಿಕಾರಿಗಳ ಸಭೆ ಕರೆದ ಡಿಜಿ-ಐಜಿಪಿ ಪ್ರವೀಣ್ ಸೂದ್‌

ಬಿ.ಟಿ.ಎಂ ಲೇಔಟ್ – ಸಿಲ್ಕ್ ಬೋರ್ಡ್ ಕಡೆಗಿನ ಎರಡೂ ಬದಿ ಚರಂಡಿ ಹಾಳಾಗಿದ್ದು, ಮಳೆ ಬಂದರೆ ಚರಂಡಿ ನೀರು ಮತ್ತು ಮಳೆ ನೀರು ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ರಾಜಕಾಲುವೆ ವಿಭಾಗದಿಂದ ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಹೊಸೂರು ರಸ್ತೆ – ಬಿಟಿಎಂ ರಸ್ತೆ ಕಡೆಗೆ ಹೋಗುವ ಸ್ಥಳದಲ್ಲಿರುವ ಕಾಲುವೆ ಮೇಲೆ ಬಿಎಂಆರ್‌ಸಿಎಲ್‌ನಿಂದ ಸ್ಲ್ಯಾಬ್ ಅಳವಡಿಸಿರುವುದು ಸುಗಮ ಸಂಚಾರಕ್ಕೆ ತೊಂದರೆ ಆಗಿದೆ. ಆದ್ದರಿಂದ ಸ್ಲ್ಯಾಬ್ ಮಟ್ಟವನ್ನು ರಸ್ತೆ ಮಟ್ಟಕ್ಕೆ ಮಾಡಿ ಇಳಿಸಿ ಸಂಚಾರಕ್ಕೆ ಅನುವು ಮಾಡಬೇಕು. ಸಿಲ್ಕ್ ಬೋರ್ಡ್-ಬಿಟಿಎಂ ಲೇಔಟ್ ಬಸ್ ನಿಲ್ದಾಣದವರೆಗೆ ರಸ್ತೆ ಸರ್ಫೇಸಿಂಗ್ ಮಾಡಲು ಬಿಎಂಆರ್ ಸಿಎಲ್‌ಗೆ ಸೂಚಿಸಲಾಗಿದೆ ಎಂದರು.

ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ವಾಟರ್ ಲಾಗಿಂಗ್ ಆಗದಿರಲು ಕೈಗೊಂಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕಿದೆ. ಸರ್ಜಾಪುರ ರಸ್ತೆಯಿಂದ ಬಂದು ಹೊರ ವರ್ತುಲ ರಸ್ತೆಗೆ ಹೋಗುವ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ವೃತ್ತದಲ್ಲಿರುವ 2 ಐ ಲ್ಯಾಂಡ್‌ಗಳನ್ನು ಮರು ವಿನ್ಯಾಸಗೊಳಿಸಿ, ಹರಳೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ ವರೆಗೆ ಎರಡು ಬದಿ ಪಾದಚಾರಿ ಮಾರ್ಗ ಅಭಿವದ್ಧಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜುಲೈ 10ಕ್ಕೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಪ್ರಾರ್ಥನೆ ಸಲ್ಲಿಸಬೇಕು. ಹಬ್ಬದ ಪ್ರಾರ್ಥನೆಗೆ ರಸ್ತೆ ಕ್ಲೋಸ್ ಮಾಡುವುದು, ಟ್ರಾಫಿಕ್‌ ಸಿಗ್ನಲ್‌ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ, ಪೊಲೀಸ್ ಇಲಾಖೆಯೊಂದಿಗೆ ಈ ಬಗ್ಗೆ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ | ವೈಟ್ ಟಾಪಿಂಗ್‌ ಕಾಮಗಾರಿ ಪೂರ್ಣ: ಗುರುವಾರದಿಂದ ಗೂಡ್ಸ್ ಶೆಡ್ ರೋಡ್‌ ಸಂಚಾರಕ್ಕೆ ಮುಕ್ತ

Exit mobile version