ಮಂಗಳೂರು: ನಗರ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯವನ್ನು ಪೊಲೀಸ್ ಇಲಾಖೆ ಚುರುಕುಗೊಳಿಸಿದೆ. ಸಮರ್ಪಕ ದಾಖಲೆ ಇಲ್ಲದ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ 518ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಪೊಲೀಸರು ಸೋಮವಾರ ವಿಚಾರಣೆ ನಡೆಸಿದರು.
ವಲಸೆ ಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸೂಚನೆ ಮೇರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 18 ತಂಡ ರಚಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸೂಕ್ತ ದಾಖಲೆ ಕೊಡದ ಜನರ ವಿಚಾರಣೆ ನಡೆಸಿದ್ದಾರೆ. ಅಸ್ಸಾಂ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದಿಂದ ನೂರಾರು ಕಾರ್ಮಿಕರು ಮಂಗಳೂರಿಗೆ ಬಂದಿದ್ದಾರೆ. ಇವರಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇರಬಹುದು ಎಂಬ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ವಲಸೆ ಕಾರ್ಮಿಕರಿಂದ ವಿಳಾಸ ದಾಖಲೆ, ಕೆಲಸ ಮಾಡುವ ಸಂಸ್ಥೆ, ಉಳಿದುಕೊಂಡ ಜಾಗ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಇನ್ನಿತರ ಸುಮಾರು 20 ಮಾಹಿತಿಗಳನ್ನು ಪ್ರತಿಯೊಬ್ಬರಿಂದ ಪೊಲೀಸರು ಪಡೆಯುತ್ತಿದ್ದಾರೆ. ಇವರು ವಿದೇಶಗಳಿಗೆ ಫೋನ್ ಕರೆ ಮಾಡಿದ್ದಾರೆಯೇ? ಬ್ಯಾಂಕ್ ಖಾತೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆಯೇ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | ಭೂವ್ಯಾಜ್ಯದಲ್ಲಿ ಲಂಚ: ಬೆಂಗಳೂರು ನಗರ ಡಿಸಿಯಾಗಿದ್ದ ಜೆ. ಮಂಜುನಾಥ್ ಬಂಧನ