ಸೊರಬ: ಪಟ್ಟಣದಲ್ಲಿ ಹಳೇ ನಾಟಾ ಅಕ್ರಮ ಸಾಗಾಟ (Illegal Nata) ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರನ್ನು ಎ1 ಆರೋಪಿಯನ್ನಾಗಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.
ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಮಂಗಳವಾರ (ಫೆ.28) ಸುದ್ದಿಗಾರರ ಜತೆ ಮಾತನಾಡಿದ ಅವರು, ಪಟ್ಟಣದ ಹಳೇ ತಾಲೂಕು ಕಚೇರಿಯ ಹಳೇ ನಾಟಾವನ್ನು ಅಕ್ರಮವಾಗಿ ಸಾಗಾಟ ಮಾಡುವ ಸಮಯದಲ್ಲಿ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಕಾನೂನು ಬದ್ಧವಾಗಿ ಎಫ್‍ಐಆರ್ ದಾಖಲು ಮಾಡಬೇಕು. ಇದು ಒಂದಡೆಯಾದರೆ, ಮತ್ತೊಂದಡೆ ನಾಟಾ ಸಾಗಾಟಕ್ಕೆ ಕುಮ್ಮಕ್ಕು ನೀಡಿದವರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮಾಹಿತಿಯ ಪ್ರಕಾರ ಸ್ಥಳೀಯ ಶಾಸಕ ನಂ.1 ಆರೋಪಿ ಹಾಗೂ ಅವರ ಆಪ್ತ ಸಹಾಯಕ ನಂ.2 ಆರೋಪಿಯನ್ನಾಗಿಸಿ ತನಿಖೆ ವೇಳೆ ಪರಿಗಣಿಸಬೇಕು ಎಂದರು.
ಕಟ್ಟಡಗಳ ತೆರವನ್ನು ಗುತ್ತಿಗೆ ಪಡೆದವರು ನಷ್ಟವಾಗಿದೆ ಎನ್ನುವ ಮಾತ್ರಕ್ಕೆ ಸಾರ್ವಜನಿಕ ಆಸ್ತಿಯನ್ನು ಗುತ್ತಿಗೆದಾರರಿಗೆ ಯಾವುದೇ ನಿಯಮಗಳ ಪಾಲನೆ ಇಲ್ಲದೆ ನೀಡಿರುವುದು ಎಷ್ಟು ಸರಿ? ಈಗಾಗಲೇ ಕೋಟ್ಯಂತರ ಬೆಲೆ ಬಾಳುವ ನಾಟಾ ಎಂದು ತಿಳಿದು ಬಂದಿದ್ದು, ನಾಟಾ ಸಾಗಾಟ ಮಾಡಲು ಶಾಸಕರು ತಮ್ಮ ಆಪ್ತ ಸಹಾಯಕನ ಮೂಲಕ ಸೂಚನೆ ನೀಡಿದ್ದು, ಎನ್ನುವುದಾದರೆ ಮೊದಲ ಆರೋಪಿ ಯಾರಾಗುತ್ತಾರೆ? ಎಂದು ಕುಟುಕಿದರು.
ಇದನ್ನೂ ಓದಿ: GST Collection : ಫೆಬ್ರವರಿಯಲ್ಲಿ 1.50 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, 12% ಹೆಚ್ಚಳ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು. ಶಾಸಕರ ಆಪ್ತ ಸಹಾಯಕ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ತಂದು ಗ್ರಾಮೀಣ ಭಾಗದ ರೈತರ ಮೇಲೆ ಪ್ರಕರಣಗಳನ್ನು ದಾಖಲಿಸಿದ ಉದಾಹರಣೆ ಇದೆ. ಕೃಷಿ ಚಟುವಟಿಕೆ ಅಥವಾ ಮನೆಯ ಉಪಯೋಗಕ್ಕಾಗಿ ಮನೆಯ ಹಿಂಭಾಗದಲ್ಲಿರುವ ಮರದ ರೆಂಬೆಯನ್ನು ತುಂಡರಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸುತ್ತಾರೆ. ಇನ್ನು ಹಳೇ ನಾಟಾ ಅಕ್ರಮ ನಾಟಾ ಸಾಗಾಟ ಕುರಿತು ಸಾರ್ವಜನಿಕರು ಸಹ ಲೋಕಾಯುಕ್ತಕ್ಕೆ ಅಹವಾಲು ಸಲ್ಲಿಸಿದ್ದಾರೆ. ಈ ಕುರಿತು ಸಹ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.