Site icon Vistara News

Illegal Nata: ಹಳೇ ನಾಟ ಅಕ್ರಮ ಸಾಗಾಟ: ಅಕ್ರಮ ನಡೆಸಿದವರ ಪರ ಧ್ವನಿ ಎತ್ತಿದ ಶಾಸಕ ಕುಮಾರ ಬಂಗಾರಪ್ಪ

Mla Kumar Bangarappa soraba

#image_title

ಸೊರಬ: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹಳೇ ನಾಟ ಅಕ್ರಮ (Illegal Nata) ಸಾಗಾಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದ್ದ ಶಾಸಕ ಕುಮಾರ ಬಂಗಾರಪ್ಪ, ಅಕ್ರಮ ನಡೆಸಿದವರ ಪರವಾಗಿ ಬಹಿರಂಗವಾಗಿ ಧ್ವನಿ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಪಟ್ಟಣದ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಪಟ್ಟಣದ ಹಳೆಯ ತಾಲೂಕು ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ನಾಟವನ್ನು ಸಂಗ್ರಹಿಸಲಾಗಿತ್ತು. ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸಾಗಾಟಕ್ಕೆ ಸಿದ್ಧವಾಗಿದ್ದ ನಾಟಾ ಹಾಗೂ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಚಂದ್ರಗುತ್ತಿ ಕಾರ್ಯಕ್ರಮವೊಂದರಲ್ಲಿ ಶಾಸಕರು ಹಳೇ ನಾಟಾ ಸಾಗಾಟದ ಕುರಿತು ಸಮರ್ಥನೆ ಮಾಡಿಕೊಂಡು ಮಾತನಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

“ಚಂದ್ರಗುತ್ತಿಯ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲೂಕಿನ ಹಳೆಯ ಕಟ್ಟಡ, ಶಿಥಿಲಾವಸ್ಥೆಯಲ್ಲಿರುವ ವಿವಿಧ ಸರ್ಕಾರಿ ಕಟ್ಟಡಗಳ ತೆರವು ಕಾರ್ಯ ಕಟ್ಟಡಗಳನ್ನು ತೆರವುಗೊಳಿಸಲು ಯಾರೂ ಮುಂದೆ ಬಾರದಿದ್ದಾಗ ಆನವಟ್ಟಿಯ ಮುನ್ನಾ ಎಂಬುವವರನ್ನು ಕರೆದುಕೊಂಡು ಬಂದು ಹಳೇ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ತೆರವುಗೊಳಿಸಿದ ನಂತರ ಅಲ್ಲಿಯ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ತಿಳಿಸಲಾಗಿತ್ತು. ಆದರೆ, ಅದರ ಸಾಗಾಟದ ವೆಚ್ಚವೇ ಜಾಸ್ತಿ ಆಗುತ್ತದೆ ಎಂದು ಮುನ್ನಾ ಹೇಳಿದ. ಜತೆಗೆ ಆತನಿಗೆ ತೆರವುಗೊಳಿಸುವ ಸಂದರ್ಭದಲ್ಲಿ ಕೂಲಿ ಕೊಟ್ಟ ಹಣವು ವಾಪಸ್ ದೊರೆಯದೆ ತುಂಬಾ ನಷ್ಟ ಸಂಭವಿಸಿದೆ ಎಂದು ಆತ ಅಲವತ್ತುಕೊಂಡ. ಈ ನಾಟಾವನ್ನು ಹರಾಜು ಹಾಕಲು ಮುಂದಾದಾಗ ಯಾರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರಲಿಲ್ಲ. ಈ ನಾಟಾಗಳು ಉಪಯೋಗಕ್ಕೂ ಬರುವುದಿಲ್ಲ ಎಂದರು. ಹೀಗಾಗಿ ಮುನ್ನಾನಲ್ಲಿಯೇ ಈ ನಾಟವನ್ನು ತೆಗೆದುಕೊಂಡು ಹೋಗಲು ತಿಳಿಸಲಾಗಿತ್ತು. ಅವುಗಳನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾಗ ಕೆಲವರು ಬಾವುಟ ಹಿಡಿದುಕೊಂಡು ಪ್ರತಿಭಟನೆಗೆ ಬಂದರು” ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು. ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಕಟವಾಗುತ್ತಿದಂತೆ ಎಚ್ಚೆತ್ತುಕೊಂಡ ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು.

ಇದನ್ನೂ ಓದಿ: Congress Politics: ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ಮುಹೂರ್ತ ನಿಗದಿ; ಆಕಾಂಕ್ಷಿಗಳಲ್ಲಿ ಢವಢವ

ಸರ್ಕಾರದ ಯಾವುದೇ ಕಟ್ಟಡವಾಗಲಿ, ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಟೆಂಡರ್ ಕರೆದು ಬಿಡ್ ಮೂಲಕ ಖರೀದಿದಾರರಿಗೆ ವಹಿಸಬೇಕು. ಪುರಸಭೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ಇಂತಹ ಪ್ರಕ್ರಿಯೆ ನಡೆದ ದಾಖಲೆಗಳಿಲ್ಲ. ಹೀಗಿದ್ದೂ ಮುನ್ನಾ ಎಂಬುವವರಿಗೆ ಯಾವುದೇ ಮೊತ್ತ ಪಡೆಯದೇ ಸಾರ್ವಜನಿಕ ಆಸ್ತಿಯನ್ನು ನೀಡಲು ಹೊರಟಿದ್ದು ಎಷ್ಟು ಸರಿ ಎನ್ನುವುದು ಸಾರ್ವನಿಕರ ಪ್ರಶ್ನೆಯಾಗಿದೆ. ನಾಟಾ ಸಾಗಾಣಿಕೆಯ ಹಿಂದೆ ದೊಡ್ಡ ಜಾಲವೇ ಇದೆ. ಶಾಸಕ ಕುಮಾರ ಬಂಗಾರಪ್ಪ ಅವರು ತನಿಖೆಗೆ ಮುಂದಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ತಾಲೂಕು ಡಿಎಸ್‍ಎಸ್, ರೈತ ಸಂಘ, ನಮೋ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಈ ನಾಟಾ ಅಕ್ರಮವಾಗಿ ಸಾಗಿಸಲಾಗಿತ್ತು ಎಂದು ದಾಖಲೆಗಳನ್ನಿಟ್ಟುಕೊಂಡು ಪ್ರತಿಭಟಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪುರಸಭೆಯ ಮುಖ್ಯಾಧಿಕಾರಿ ತಾಲೂಕು ಕಚೇರಿಯ ಆರ್‌ಆರ್‌ವಿ ಶಿರಸ್ತೇದಾರ್ ನಾಗರಾಜ್ ಸೂಚಿಸಿದ್ದರಿಂದ ಮುನ್ನಾ ಎಂಬುವವರಿಗೆ ನೀಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ತನಿಖೆ ನಡೆಸುವಂತೆ ದೂರು ಸಲ್ಲಿಸಿದ್ದರು.

ಈ ಎಲ್ಲ ಬೆಳವಣಿಗೆಯ ನಡುವೆ ನಮೋ ವೇದಿಕೆಯವರು ಆರೋಪಿಸಿದಂತೆ ಶಾಸಕ ಕುಮಾರ ಬಂಗಾರಪ್ಪನವರ ಆಪ್ತ ಸಹಾಯಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಶಾಸಕರು ಸಹ ತಮ್ಮ ಆಪ್ತ ಸಹಾಯಕನ ರಕ್ಷಣೆಯಲ್ಲಿ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅಲ್ಲದೆ, ಶಾಸಕರ ಈ ಹೇಳಿಕೆಯಿಂದ ಅಧಿಕಾರಿಗಳ ತನಿಖೆಯ ದಿಕ್ಕನ್ನು ತಪ್ಪಿಸುವ ಹುನ್ನಾರ ಅಡಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: 7th Pay commission : ನಾಳೆಯಿಂದ ಸರ್ಕಾರಿ ನೌಕರರ ಮಹಾಮುಷ್ಕರ; ಸಿಎಂ ಬೊಮ್ಮಾಯಿ ಭರವಸೆ ಕೆಲಸ ಮಾಡುತ್ತಾ?

ಶಾಸಕರು ಬಹಿರಂಗ ಚರ್ಚೆಗೆ ಬರಲಿ- ಮಹೇಶ್ ಶಕುನವಳ್ಳಿ

“ಸೊರಬ ಪಟ್ಟಣದಲ್ಲಿ ನಡೆದ ಅಕ್ರಮ ನಾಟಾ ಸಾಗಾಟದ ವಿರುದ್ಧವಾಗಿ ಧ್ವನಿ ಎತ್ತಿದವರ ಕುರಿತು ಶಾಸಕರು ವ್ಯಂಗ್ಯವಾಗಿ ಮಾತನಾಡಿರುವುದು ಹೋರಾಟಗಾರರಿಗೆ ಅವಮಾನಿಸಿದಂತಾಗಿದೆ. ಶಾಸಕರು ತಮ್ಮ ಆಪ್ತ ಸಹಾಯಕನ ಅಕ್ರಮವನ್ನು ಮುಚ್ಚಿ ಹಾಕಲು ನೈಜ ಹೋರಾಟಗಾರನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅಕ್ರಮ ನಾಟಾ ಸಾಗಾಟ ಕುರಿತು ದಾಖಲೆಗಳನ್ನು ನಾವು ತರುತ್ತೇವೆ. ಶಾಸಕರು ಬಹಿರಂಗ ಚರ್ಚೆಗೆ ಬರಲಿ” ಎಂದು ಡಿಎಸ್‍ಎಸ್ ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಸವಾಲು ಹಾಕಿದ್ದಾರೆ.

“ಅಕ್ರಮ ನಾಟಾ ಸಾಗಾಟ ಕುರಿತು ಲೋಕಾಯುಕ್ತಕ್ಕೆ ರೈತ ಸಂಘದಿಂದ ದೂರು ಸಲ್ಲಿಸಲು ತೆರಳಿದರೆ ದೂರನ್ನು ಸ್ವೀಕರಿಸಲಿಲ್ಲ. ದೂರಿನನ್ವಯ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬದಲು, ಕೋರ್ಟ್‍ನಿಂದ ನೋಟರಿ ಮಾಡಿಸಿಕೊಂಡು, ನಿಗದಿತ ನಮೂನೆಯಲ್ಲಿ ದೂರು ಸಲ್ಲಿಸುವಂತೆ ಅಧಿಕಾರಿಗಳು ಸೂಚನೆ ನೀಡುತ್ತಾರೆ. ಇದು ಸರಿಯಲ್ಲ. ಹಳೇ ನಾಟಾ ಅಕ್ರಮ ಸಾಗಾಟ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅಕ್ರಮವನ್ನು ಬಯಲಿಗೆ ತರಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂಭಾಗ ಡಿಎಸ್‍ಎಸ್ ಸಹಕಾರದೊಂದಿಗೆ ನಿರಂತರ ಧರಣಿ ನಡೆಸಲಾಗುವುದು” ಎಂದು ರೈತ ಸಂಘ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

Exit mobile version