ಯಾದಗಿರಿ: ರಾಜ್ಯದಲ್ಲಿರುವ ಐತಿಹಾಸಿಕ ಹಾಗೂ ಪಾರಂಪರಿಕ ಸ್ಮಾರಕಗಳು (Monuments) ಮತ್ತು ಪ್ರವಾಸಿ ತಾಣಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ರಾಜ್ಯ ಸರ್ಕಾರವು (State Government) ದತ್ತು ನೀಡುವಂತಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ .ಪಾಟೀಲ್ ತಿಳಿಸಿದರು.
ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿನ ದೇವಾಲಯಗಳ ಸ್ಮಾರಕಗಳಿಗೆ ಭೇಟಿ ನೀಡಿ ನಂತರ ನಮ್ಮ ಸ್ಮಾರಕ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐತಿಹಾಸಿಕ ಹಾಗೂ ಪಾರಂಪರಿಕ ಮತ್ತು ಸಾಂಸ್ಕೃತಿಕ ಕುರುಹುಗಳು ರಾಜ್ಯಾದ್ಯಂತ ಇದ್ದು, ಸುಮಾರು ಒಂದು ಸಾವಿರ ಇಂತಹ ಸ್ಮಾರಕಗಳನ್ನು ಗುರುತಿಸಲಾಗಿದ್ದು, ಮುಂದಿನ ಪೀಳಿಗೆ ಹಾಗೂ ಜನಾಂಗಕ್ಕೆ ಪರಿಚಯಿಸುವ ದಿಶೆಯಲ್ಲಿ ಸ್ಮಾರಕಗಳನ್ನು ದತ್ತು ನೀಡಿ, ಅವುಗಳ ಪುನಃಶ್ಚೇತನ ಮತ್ತು ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು, ಉಳ್ಳವರು , ದಾನಿಗಳಿಗೆ ಸ್ಮಾರಕಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ದತ್ತು ನೀಡಿ ಸಂರಕ್ಷಿಸಲು ಗಮನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Exam Tips: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೀಗೆ ತಯಾರಾಗಿ
ಸರ್ಕಾರದ ಜತೆಗೆ ಆಯಾ ಐತಿಹಾಸಿಕ ತಾಣಗಳನ್ನು ಮತ್ತು ಸ್ಮಾರಕಗಳನ್ನು ಹೊಂದಿರುವಂತಹ ಗ್ರಾಮಗಳ ಗ್ರಾಮಸ್ಥರು ಕೂಡ ಕೈಜೋಡಿಸುವ ಕಾರ್ಯ ಮಾಡಬೇಕು. ಹಿರಿಯರು ನೀಡಿದ ಕೊಡುಗೆಗಳು ಇವಾಗಿದ್ದು, ನಾವೆಲ್ಲರೂ ಇಂತಹ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಗಮನ ನೀಡುವ ಅವಶ್ಯಕತೆ ಇದೆ, ಇಂತಹ ಸ್ಮಾರಕಗಳ ಬಗ್ಗೆ ಗೌರವ ಅಭಿಮಾನ ವನ್ನು ಹೊಂದಬೇಕು. ವಿಶೇಷವಾಗಿ ಈ ಸ್ಮಾರಕಗಳ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವುದು ಮುಖ್ಯವಾಗಿದೆ. ಈ ದಿಶೆಯಲ್ಲಿ ಜಿಲ್ಲೆಯಲ್ಲಿರುವ ಸ್ಮಾರಕಗಳ ಬಗ್ಗೆ ಎಲ್ಲರೂ ವಿಶೇಷ ಗಮನ ನೀಡಬೇಕು.
ಅದರಂತೆ ಶಹಾಪುರ ತಾಲೂಕಿನಲ್ಲಿ ವಿಶೇಷವಾಗಿ ಶಿರವಾಳದಲ್ಲಿ ಸುಮಾರು 360 ಸ್ಮಾರಕಗಳು, ಸಾವಿರಾರು ಲಿಂಗಗಳು, ಗುಡಿ ಗುಂಡಾರಗಳು ಇರುವ ಬಗ್ಗೆ ತಿಳಿದುಬಂದಿದೆ. ‘ದಕ್ಷಿಣದ ಕಾಶಿ’ ಎಂದೇ ಪ್ರಖ್ಯಾತಿ ಹೊಂದಿರುವ ಇಲ್ಲಿನ ದೇವಸ್ಥಾನಗಳು ಮತ್ತು ಇತರೆ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವ ಜತೆಗೆ ಪುನಶ್ಚೇತನ ಮಾಡುವ ಅಗತ್ಯವಿದೆ. ಈ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಗ್ರಾಮಸ್ಥರು ಕೂಡ ಸರ್ಕಾರದೊಂದಿಗೆ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಇದನ್ನೂ ಓದಿ: Eggs vs Paneer: ಮೊಟ್ಟೆ ಒಳ್ಳೆಯದೋ ಪನೀರ್ ಒಳ್ಳೆಯದೋ?
ರಾಜ್ಯ ಸರ್ಕಾರವು ಈಗ ಅನುಷ್ಠಾನಗೊಳಿಸುತ್ತಿರುವ ದತ್ತು ಕಾರ್ಯಕ್ರಮದ ಅಡಿಯಲ್ಲಿ ಯಾದಗಿರಿ ಕೋಟೆಯನ್ನು ಸಹ ಹೈದರಾಬಾದ್ ಮೂಲದ ಹರ್ಷ ಲಾಹೋಟಿ ಇವರ ಸಂಸ್ಥೆಗೆ ದತ್ತು ನೀಡುವ ಒಡಂಬಡಿಕೆ ಸಹ ಆಗಿದ್ದು, ಇಂದು ಅವರಿಗೆ ಸನ್ಮಾನ ಸಹ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಜಿಲ್ಲಾಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಸಾಥ್ ನೀಡಿದರು.
ಇದನ್ನೂ ಓದಿ: Viral Video: ಬಾವಿಗೆ ಇಳಿದು 11 ಹಾವು ರಕ್ಷಿಸಿದ ಸಾಹಸಿ! ಧೈರ್ಯಕ್ಕೆ ಶರಣು ಅಂದ್ರು ಜನ
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ದೇವರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.