ಬೆಂಗಳೂರು: ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಹುದೊಡ್ಡ ಅಚಾತುರ್ಯವೊಂದು ನಡೆದು ಹೋಗಿದೆ. ಮಂಡಳಿಯ ನಾಲ್ಕುದಶಕಗಳ ಮಹತ್ವದ ದಾಖಲೆಗಳು ವಾಚ್‌ಮನ್‌ನ ಎಡವಟ್ಟಿನಿಂದಾಗಿ ಗುಜರಿ ಸೇರಿವೆ.
ವಿಷಯ ಗೊತ್ತಾಗುತ್ತಿದ್ದಂತೆಯೇ ಏನು ಮಾಡಬೇಕೆಂದು ತೋಚದ ಮಂಡಳಿ ಈಗ ಪೊಲೀಸರ ಮೊರೆ ಹೋಗಿದೆ. ಹೀಗೆ ಗುಜರಿ ಸೇರಿದ ದಾಖಲೆಗಳಲ್ಲಿ ಅಮೂಲ್ಯವಾದ ಅನೇಕ ಫೈಲ್‌ಗಳಿದ್ದವೆಂದು ಹೇಳಲಾಗಿದೆ. ಇದರಿಂದ ಮಂಡಳಿಗೆ ತುಂಬಲಾರದ ನಷ್ಟ ಉಂಟಾಗಿರುವುದು ಖಚಿತ ಪಟ್ಟಿದೆ.
ನಡೆದಿದ್ದಾದರೂ ಏನು?
ವಾಣಿಜ್ಯ ಮಂಡಳಿಯ ಹಿಂದಿನ ಖಜಾಂಚಿಯಾಗಿದ್ದ ವೆಂಕಟೇಶ್ ಅವರು ಕೂಳಿತುಕೊಳ್ಳುತ್ತಿದ್ದ ಕೊಠಡಿ ಸ್ವಚ್ಛಗೊಳಿಸುವಂತೆ ವಾಚ್‌ಮನ್‌ಗೆ ಸೂಚಿಸಲಾಗಿತ್ತು. ವಾಚ್‌ಮನ್ ಆ ಕೊಠಡಿಯಲ್ಲಿದ್ದ ಸಾವಿರಾರು ಫೈಲ್‌ಗಳನ್ನು ಕಸ ಎಂದೇ ತಿಳಿದು ಗುಜರಿಗೆ ಎಸೆದಿದ್ದಾನೆ. ಚಿತ್ರರಂಗದ ಇತಿಹಾಸದಲ್ಲಿ ನಡೆದ ಘಟನೆಗಳು, ಏಳು ಬೀಳುಗಳು, ದೂರು ಪ್ರತಿಗಳು ಹೀಗೆ ಹಲವು ಮಾಹಿತಿಯ ಫೈಲ್‌ಗಳನ್ನು ಈ ಕೊಠಡಿಯಲ್ಲಿ ಇಡಲಾಗಿತ್ತು. ಜೂನ್ 11ರಂದು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಖಜಾಂಚಿಯಾಗಿ ಆಯ್ಕೆಯಾಗಿರುವ ‘ದುನಿಯಾ’ ಚಿತ್ರದ ನಿರ್ಮಾಪಕ ಟಿ.ಪಿ. ಸಿದ್ಧರಾಜು ಕೊಠಡಿ ಪ್ರವೇಶಿಸಿದಾಗ ಕೊಠಡಿ ಖಾಲಿಯಾಗಿರುವುದನ್ನು ನೋಡಿ ದಂಗಾಗಿದ್ದಾರೆ.
ದಾಖಲೆಗಳು ಕಣ್ಮರೆಯಾಗಿರುವ ಬಗ್ಗೆ ನೂತನ ಪದಾಧಿಕಾರಿಗಳು ಸಿಬ್ಬಂದಿಯನ್ನು ವಿಚಾರಿಸಿದಾಗ ಈ ಹಿಂದಿನ ಖಜಾಂಚಿ ಕೊಠಡಿ ಸ್ವಚ್ಛಗೊಳಿಸಲು ಹೇಳಿದ್ದು, ವಾಚ್‌ಮನ್ ಮಂಜುನಾಥ್ ದಾಖಲೆಗಳನ್ನು ಗುಜರಿಗೆ ಹಾಕಿರುವುದು ತಿಳಿದುಬಂದಿದೆ.
ಈ ಕೃತ್ಯವನ್ನು ಯಾರೋ ಉದ್ದೇಶಪೂರ್ವಕವಾಗಿ ಮಾಡಿಸಿರಬಹುದೆಂಬ ಅನುಮಾನ ನೂತನ ಪದಾಧಿಕಾರಿಗಳದ್ದಾಗಿದೆ. ಈಗ ಗುಜರಿ ಸೇರಿರುವ ಕಡತಗಳಲ್ಲಿ ಹಣಕಾಸಿಗೆ ಸಂಬಂಧಪಟ್ಟ ದಾಖಲೆಗಳು ಇರುವುದರಿಂದ ವಾಚ್‌ಮನ್ ಮಂಜುನಾಥನನ್ನು ತನಿಖೆಗೊಳಪಡಿಸಿ ಸತ್ಯಾಸತ್ಯತೆ ತಿಳಿದು, ಕಾಣೆಯಾಗಿರುವ ದಾಖಲೆಗಳನ್ನು ವಾಪಸ್ ಕೊಡಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಭಾ.ಮ.ಹರೀಶ್ ಪೊಲೀಸರನ್ನು ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ | ರಜನಿಕಾಂತ್, ಶಿವಣ್ಣ ಸಿನಿಮಾದ ಪೋಸ್ಟರ್ ರಿಲೀಸ್, ಜೈಲರ್ ಆಗಿ ಆರ್ಭಟಿಸಲಿದ್ದಾರೆ ಸೂಪರ್ಸ್ಟಾರ್