ಶಶಿಧರ್ ಮೇಟಿ, ಬಳ್ಳಾರಿ
ಹಲವು ವರ್ಷಗಳಿಂದ ಪ್ರಭಾರಿ ನಿರ್ದೇಶಕರಿಂದಲೇ ರಾಜ್ಯದ ಹಲವು ಮೆಡಿಕಲ್ ಕಾಲೇಜು(Medical College) (ವೈದ್ಯಕೀಯ ವಿಜ್ಞಾನ ಸಂಸ್ಥೆ)ಗಳ ಆಡಳಿತ ಯಂತ್ರ ಕುಸಿದಂತಾಗಿ, ಪ್ರಭಾರಿ ಕುರ್ಚಿಗಾಗಿ ಹಗ್ಗ-ಜಗ್ಗಾಟಗಳಿಗೆ ಕಾರಣವಾಗಿತ್ತು. ಅಭಿವೃದ್ಧಿಯು ಅಷ್ಟಕಷ್ಟೇ ಎನ್ನುವಂತಾಗಿತ್ತು. ಇದೀಗ ರಾಜ್ಯದ 14 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕಾಯಂ ನಿರ್ದೇಶಕರನ್ನು ನೇಮಿಸಿ, ಪ್ರಭಾರಿಗೆ ಇತೀಶ್ರೀ ಹಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ.
ಇಷ್ಟು ವರ್ಷಗಳ ಕಾಲ ಪ್ರಭಾರಿ ನಿರ್ದೇಶಕರ ಕೈಯಲ್ಲಿಯೇ ಬಹುತೇಕ ಮೆಡಿಕಲ್ ಕಾಲೇಜುಗಳಿದ್ದರೂ, ಸರಕಾರವು ತನ್ನ ಅವಧಿಯ ಕೊನೆಯ ಹಂತದಲ್ಲಿಯೇ ಖಾಯಂ ನಿರ್ದೇಶಕರ ನೇಮಕಕ್ಕೆ ಮುಂದಾಗಿರುವುದು ಪರ- ವಿರೋಧದ ಚರ್ಚೆಗೆ ಕಾರಣವಾಗಿದೆ. ಈ ಕೆಲಸವನ್ನು ಸರಕಾರ ಆರಂಭದಲ್ಲಿಯೇ ಮಾಡಿದ್ದರೆ, ಮೆಡಿಕಲ್ ಕಾಲೇಜುಗಳಲ್ಲಿ ಉತ್ತಮ ಆಡಳಿತ ಕೊಡಬಹುದಾಗಿತ್ತು ಎನ್ನುವ ಮಾತಿದೆ.
8 ಸಂಸ್ಥೆಗಳಲ್ಲಿ ಮಾತ್ರ ಕಾಯಂ ನಿರ್ದೇಶಕರು
ರಾಜ್ಯದಲ್ಲಿ 60ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಅದರಲ್ಲಿ ಸರಕಾರದ 22 ಕಾಲೇಜುಗಳಿವೆ. ಅದರಲ್ಲಿ ಕೇವಲ 8 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮಾತ್ರ ಕಾಯಂ ನಿರ್ದೇಶಕರು ಇದ್ದರು. ಇದೀಗ ಎಲ್ಲಾ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಗಳಲ್ಲಿ ಕಾಯಂ ನಿರ್ದೇಶಕರ ನೇಮಕಕ್ಕೆ ಇಲಾಖೆ ಜುಲೈ ತಿಂಗಳಲ್ಲಿಯೇ ಅರ್ಜಿ ಆಹ್ವಾನಿಸಿದೆ.
ಕಾಯಂ ನಿರ್ದೇಶಕರಿಂದಾಗುವ ಉಪಯೋಗ
ಕಾಯಂ ನಿರ್ದೇಶಕರು ಮೂರು ವರ್ಷಗಳ ಅವಧಿಗೆ ನೇಮಕರಾಗುತ್ತಾರೆ. ಪ್ರಭಾರಿ ಇದ್ದರೆ ಯಾವ ಸಂದರ್ಭದಲ್ಲಾದರೂ ನಿರ್ದೇಶಕ ಸ್ಥಾನದಿಂದ ಇಳಿಸಬಹುದು. ಆಗ ಅಧಿಕಾರದ ಖುರ್ಚಿ ಉಳಿಸಿಕೊಳ್ಳಲು ರಾಜಿ ಮೂಲಕವೇ ಆಡಳಿತ ಮಾಡಬೇಕಾಗುತ್ತದೆ. ಇನ್ನು ನಿರ್ದೇಶಕ ಕುರ್ಚಿಯ ಆಕಾಂಕ್ಷಿಗಳು ನಿರಂತರವಾಗಿ ಅಧಿಕಾರಕ್ಕಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ಇಂತಹ ಬೆಳವಣಿಗೆಯಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತದ ಮೇಲೆ ಪ್ರಭಾವಕ್ಕೆ ಕಾರಣವಾಗುತ್ತಿತ್ತು. ಇದರಿಂದಾಗಿ ಹಲವು ವರ್ಷಗಳಿಂದ ಕಾಯಂ ನಿರ್ದೇಶಕ ನೇಮಕ ಬೇಡಿಕೆ ಇತ್ತು.
ಕೆಲವೇ ದಿನಗಳಲ್ಲಿಯೇ ಕಾಯಂ ನಿರ್ದೇಶಕರು
ಈಗಾಗಲೇ ಕಾಯಂ ನಿರ್ದೇಶಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಕೆಲವೇ ತಿಂಗಳಲ್ಲಿಯೇ ರಾಜ್ಯದ ಎಲ್ಲಾ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪೂರ್ಣಕಾಲಿಕ ನಿರ್ದೇಶಕರು ಬರಲಿದ್ದಾರೆ. ಈ ಮೂಲಕವಾದರೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಅಧಿಕಾರ ಲಾಬಿಗಳು ಕಡಿಮೆಯಾಗಿ ಆಡಳಿತ ಸುಧಾರಣೆಯಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಯಾವ ಸಂಸ್ಥೆಗಳಲ್ಲಿ ಕಾಯಂ ನಿರ್ದೇಶಕರಿಗೆ ಅರ್ಜಿ?
ಮೈಸೂರು ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೀದರ್‌ನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಸರ್ಕಾರಿ ದಂತ ಕಾಲೇಜು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ, ಧಾರವಾಡದ ಮಾನಸಿಕ ಆರೋಗ್ಯ ನರ ವಿಜ್ಞಾನ ಸಂಸ್ಥೆ, ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ ಸಂಜಯ್ ಗಾಂಧಿ ಡ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಯಾದಗಿರಿಯ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗಳಲ್ಲಿ ಕಾಯಂ ನಿರ್ದೇಶಕರನ್ನು ನೇಮಿಸಲು ಇಲಾಖೆ ಮುಂದಾಗಿದೆ.
ಇದನ್ನೂ ಓದಿ | ವಿಸ್ತಾರ ವಿಶೇಷ | ಸೇನೆ ಸೇರಬಯಸಿದ್ದ ಎಂಜಿನಿಯರ್ ಕೊನೆಗೆ ಸರಳ ವಾಸ್ತು ತಜ್ಞರಾಗಿದ್ದರು!