Site icon Vistara News

ಸಿಎಂ ಅಭ್ಯರ್ಥಿ ಘೋಷಣೆ ಆದ ದಿನವೇ ರಾಜ್ಯದಲ್ಲಿ ಕಾಂಗ್ರೆಸ್‌ ಫಿನಿಶ್‌ ಎಂದ ಶೆಟ್ಟರ್‌

Ex CM jagadish shettar

ಗದಗ: ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷವಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಇಬ್ಬರಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂಬ ಹೊಡೆದಾಟದಲ್ಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನೆಲ ಕಚ್ಚಲಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಆಂತರಿಕ ಸಂಘರ್ಷದಿಂದಲೇ ಕಾಂಗ್ರೆಸ್ ಸಂಪೂರ್ಣ ನಿರ್ನಾಮ ಆಗಲಿದೆ. ಪಂಜಾಬ್‌ನಲ್ಲಿ ಒಬ್ಬ ಸಿಧು ಪಕ್ಷವನ್ನು ನಾಶ ಮಾಡಿ ಜೈಲಿಗೆ ಹೋಗಿದ್ದಾನೆ, ಹಾಗೆಯೇ ರಾಜ್ಯದಲ್ಲೂ ಸಿದ್ದು ಕಾಂಗ್ರೆಸ್ ನಾಶ ಮಾಡುತ್ತಾರೆʼʼ ಎಂದು ವ್ಯಂಗ್ಯವಾಡಿದರು.

ʻʻಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ‌ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ, ಅಂದೇ ಕಾಂಗ್ರೆಸ್ ನಿರ್ನಾಮ ಆಗುತ್ತೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡೋದಿಲ್ಲ ಅಂತ ಹೇಳಿದಾಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇರೋದಿಲ್ಲ,ʼʼ ಎಂದರು ಶೆಟ್ಟರ್‌.

ʻʻಕಾಂಗ್ರೆಸ್‌ನವರಿಗೆ ಬೆಳಗ್ಗೆಯಿಂದ ಸಂಜೆವರೆಗೂ ಆರ್‌ಆರ್‌ಎಸ್ ನ್ನು ಟೀಕಿಸುವುದೇ ಹವ್ಯಾಸವಾಗಿದೆ. ಹಾಗೆ ಮಾಡದೆ ಇದ್ದರೆ ತಿಂದದ್ದು ಜೀರ್ಣವಾಗೋದಿಲ್ಲ ಎಂದ ಅವರು, ಹಿಂದೂಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಲಿಕ್ಕೆ ತಯಾರಿಲ್ಲ, ಹೀಗಾಗಿ ಆರ್‌ಎಸ್‌ಎಸ್‌ ಟೀಕೆ ಮಾಡುತ್ತಾ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲʼʼ ಎಂದು ಟೀಕಿಸಿದರು.

ಇದನ್ನೂ ಓದಿ | ಮಂಡ್ಯದಲ್ಲಿ BJP ಅರಳಿಸಲು ಅನ್ಯ ಪಕ್ಷಗಳ ಮುಖಂಡರಿಗೆ ಗಾಳ

Exit mobile version