Site icon Vistara News

Vijayanagara News: ಹೊಸಪೇಟೆಯಲ್ಲಿ ವಿವಿಧ ಕಚೇರಿಗಳನ್ನು ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್

Inauguration of various offices by Vijayanagar district in charge minister

ಹೊಸಪೇಟೆ: ತಾಲೂಕು ಆಡಳಿತ ಕಚೇರಿ (Taluk Administrative Office) ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಇ-ಆಫೀಸ್ (E-Office) ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ತಾತ್ಕಾಲಿಕ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಬುಧವಾರ ಉದ್ಘಾಟಿಸಿದರು.

ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಕೈಗೊಂಡಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ವಿವಿಧ ಇಲಾಖೆಗಳ ಕಚೇರಿ ಇಲ್ಲದೇ ಬಳ್ಳಾರಿ ಹಾಗೂ ಇತರ ಜಿಲ್ಲೆಯಿಂದ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಪಡೆದು, ತಾತ್ಕಾಲಿಕ ಕಚೇರಿ ತೆರೆಯಲು ಪ್ರಭಾರ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲಾ ಮಟ್ಟದ ಕೈಮಗ್ಗ, ಕೌಶಲ್ಯಾಭಿವೃದ್ಧಿ, ರೇಷ್ಮೆ, ಡಾ.ಬಿ‌.ಆರ್‌.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾತ್ಕಾಲಿಕ ಕಚೇರಿ ಆರಂಭಿಸಲಾಯಿತು. ನಿಗದಿತ ದಿನಗಳಲ್ಲಿ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಇಲಾಖೆಯ ಸೌಲಭ್ಯ ಮತ್ತು ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಸೂಚಿಸಿದರು.

ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಸೂಚನೆ

ನಗರದ ಹೊರವಲಯದ ಹೊಸಪೇಟೆ-ಬಳ್ಳಾರಿ ಬೈಪಾಸ್ ಬಳಿ ನೂತನವಾಗಿ 250 ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 250 ಹಾಸಿಗೆ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಅವರು ಇದೇ ಸ್ಥಳದಲ್ಲಿ ಕ್ರಿಟಿಕಲ್ ಕೇರಿಂಗ್ ಸೆಂಟರ್ ನಿರ್ಮಾಣಕ್ಕೆ 2 ಎಕರೆ ಭೂಮಿ ಒದಗಿಸಲು ಪ್ರಸ್ತಾವ ಸಲ್ಲಿಸಲು ಕೋರಿದರು‌. ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ನಂತರ ಜಂಬುನಾಥ ಹಳ್ಳಿಯಲ್ಲಿ ಬರುವ ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ ಶಾಲಾ ಸೌಕರ್ಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ವಲಯದ ಆವರಣವನ್ನು ಸ್ವಚ್ಛಗೊಳಿಸಿ, ಉತ್ತಮ ಆಟದ ಮೈದಾನಕ್ಕೆ ಅನುವು ಮಾಡಿಕೊಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಪಾಪಿನಾಯಕನಹಳ್ಳಿ ಏತನೀರಾವರಿ ಯೋಜನೆಯ ನಲ್ಲಾಪುರ ಕೆರೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಏತ ನೀರಾವರಿ ಕಾಮಗಾರಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ಆಯೋಜಿಸಲು ಸೂಚಿಸಿದರು.

ಇದನ್ನೂ ಓದಿ | Karnataka Politics : ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ಕೃಷಿ ನೀತಿ ಖಂಡಿಸಿ ಜನಾಂದೋಲನ

ಹಂಪಿಗೆ ಭೇಟಿ

ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ‌.ಝಡ್‌.ಜಮೀರ್ ಅಹ್ಮದ್ ಖಾನ್, ಹಂಪಿಯ ಜನತಾ ಬಜಾರ್ ಪ್ರದೇಶಕ್ಕೆ ತೆರಳಿ ಅಲ್ಲಿನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ನಂತರ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ದೇವಸ್ಥಾನದ ಆವರಣದಲ್ಲಿ ಹಂಪಿ ಆನೆ ಲಕ್ಷ್ಮಿ ಸೊಂಡಿಲಿನಿಂದ ಆಶೀರ್ವದಿಸಿ ಸ್ವಾಗತಿಸಿತು. ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಉಪಸ್ಥಿತರಿದ್ದರು.

Exit mobile version