ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮಿತಿ 80ರಿಂದ 100ಕ್ಕೆ ಏರಿಸಲು ಅನುಮತಿ ನೀಡಿ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪಿಯು ಕಾಲೇಜುಗಳಿಂದ ಪ್ರಥಮ ಪಿಯುಸಿಗೆ ಗರಿಷ್ಠ ದಾಖಲಾತಿ ಮಿತಿ 80 ಇದ್ದದ್ದನ್ನು 100ಕ್ಕೆ ಏರಿಸಲು ಮನವಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯ ಇರಬೇಕಾಗಿದೆ. ಹಾಗೆಯೇ ಹೊಸ ಭಾಷೆ, ಹೊಸ ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳ ಮಂಜೂರಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 5ರ ರಾತ್ರಿ 12 ಗಂಟೆವರೆಗೆ ಇಲಾಖೆ ವಿಸ್ತರಿಸಿದೆ. ಈ ಸುತ್ತೋಲೆಯು 2022-23ನೇ ಸಾಲಿಗೆ ಸೀಮಿತವಾಗಿರುತ್ತದೆ.
ಪ್ರತಿ ಸಂಯೋಜನೆಯ ಒಂದು ವಿಭಾಗಕ್ಕೆ ಮಾತ್ರ ಜಿಲ್ಲಾ ಹಂತದಲ್ಲಿ ಹೆಚ್ಚುವರಿ 20 ವಿದ್ಯಾರ್ಥಿಗಳ ದಾಖಲಾತಿಗೆ ನಿಯಮಾನುಸಾರ ಪರೀಶಿಲನೆ ನಡೆಸಿ ಅನುಮತಿ ನೀಡಲಾಗುವುದು, ಒಂದಕ್ಕಿತ ಹೆಚ್ಚಿನ ಸಂಯೋಜನೆಗಳಿದ್ದಲ್ಲಿ ಹೆಚ್ಚುವರಿ ವಿಭಾಗದ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕು. ಇಲಾಖೆಯ ಸುತ್ತೋಲೆ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | 2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ